ಅತೀಕ್ ಅಹ್ಮದ್ ಹತ್ಯೆ: ಪ್ರಯಾಗ್‌ರಾಜ್ ನಲ್ಲಿ ಇಂಟರ್‌ನೆಟ್ ಸ್ಥಗಿತ

ಪ್ರಯಾಗರಾಜ್: ಪೊಲೀಸರ ಬಿಗಿಭದ್ರತೆಯ ನಡುವೆಯೂ ರಾಜಕಾರಣಿ ಅತೀಕ್ ಅಹ್ಮದ್ ಹಾಗೂ ಅವರ ಸಹೋದರ ಅಶ್ರಫ್‌ರನ್ನ ಕೊಲೆ ಮಾಡಿದ ಮರುದಿನ ಉತ್ತರಪ್ರದೇಶ ಪೊಲೀಸರು ರಾಜ್ಯಾದ್ಯಂತ ಬಿಗಿ ಭದ್ರತೆಯನ್ನು ತೀವ್ರಗೊಳಿಸಿದ್ದಾರೆ. ಈ ನಡುವೆ ಅವರ ಮನೆ ಇರುವ ಪ್ರಯಾಗ್‌ರಾಜ್ ನಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗಿದ್ದು, ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಉತ್ತರ ಪ್ರದೇಶದ ಎಲ್ಲಾ ಜಿಲ್ಲೆಗಳಲ್ಲಿ ಅಪರಾಧ ಪ್ರಕ್ರಿಯಾ ಸಂಹಿತೆಯ (CrPC) ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ಹೊರಡಿಸಲಾಗಿದೆ. ಭದ್ರತಾ ಕ್ರಮಗಳ ಭಾಗವಾಗಿ ಪ್ರಯಾಗರಾಜ್ ಜಿಲ್ಲೆಯಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಶನಿವಾರ ರಾತ್ರಿ ಪೊಲೀಸ್ ಸಿಬ್ಬಂದಿ ತಪಾಸಣೆಗಾಗಿ ಇಲ್ಲಿನ ವೈದ್ಯಕೀಯ ಕಾಲೇಜಿಗೆ ಅವರನ್ನು ಕರೆದೊಯ್ಯುತ್ತಿದ್ದಾಗ ಮಾಧ್ಯಮ ಸಂವಾದದ ಮಧ್ಯದಲ್ಲಿ ಪತ್ರಕರ್ತರಂತೆ ನಟಿಸುತ್ತಿದ್ದ ಮೂವರು ಸಹೋದರರಿಬ್ಬರನ್ನು ಕೊಲೆಗೈದಿದ್ದರು. ಈ ಮೂವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಶಸ್ತ್ರಾಸ್ತ್ರಗಳನ್ನೂ ಸ್ಥಳದಿಂದ ವಶಪಡಿಸಿಕೊಂಡಿದ್ದಾರೆ.





