ದೇಶಪ್ರೇಮ, ಧರ್ಮದ್ವೇಷದ ಮರೆಯಲ್ಲಿ ಬಿಜೆಪಿ ದುಡಿಯವ ಜನರ ಬದುಕು ಕಸಿಯುತ್ತಿದೆ : ಮುನೀರ್ ಕಾಟಿಪಳ್ಳ

ಮಂಗಳೂರು: ದೇಶಪ್ರೇಮ, ಧರ್ಮದ್ವೇಷದ ಮರೆಯಲ್ಲಿ ಬಿಜೆಪಿ ದುಡಿಯವ ಜನರ ಬದುಕು ಕಸಿಯುತ್ತಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಇಳಿಸದಿದ್ದಲ್ಲಿ ದುಡಿಯುವ ಜನರಿಗೆ ಮತ್ತಷ್ಟು ಅಪಾಯ ಕಾದಿದೆ ಎಂದು ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಹೇಳಿದರು.
ಅವರು ಮಂಗಳೂರು ಉತ್ತರ ವಿಧಾನಸಭಾ ವ್ಯಾಪ್ತಿಯ ಗುರುಪುರ, ಕೈಕಂಬದಲ್ಲಿ ಸಿಪಿಐಎಂ ಪಕ್ಷದ ವಲಯ ಮಟ್ಟದ ಪ್ರಮುಖ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕಾರ್ಪೊರೇಟ್ ಬಂಡವಾಳಶಾಹಿಗಳ ಹಿತಕಾಯುವ ಬಿಜೆಪಿ ಆಡಳಿತದಲ್ಲಿ ಜನಸಾಮಾನ್ಯರ ದೈನಂದಿನ ಜೀವನ ದುಸ್ತರ ಆಗಿದೆ. ಬೆಲೆಯೇರಿಕೆಯ ಬಿಸಿಗೆ ಜನರು ತತ್ತರಿಸಿ ಹೋಗಿದ್ದಾರೆ. ನಾಲ್ಕು ವರ್ಷಗಳ ಬಿಜೆಪಿ ಆಡಳಿತದಲ್ಲಿ ಅದರ ಶಾಸಕರುಗಳು ಕೋಟ್ಯಾಂತರ ಆಸ್ತಿಯನ್ನು ಅಕ್ರಮವಾಗಿ ಸಂಪಾದಿಸಿದ್ದು ಬಿಟ್ಟರೆ ಜನತೆಗಾಗಿ ಮಾಡಿದ್ದು ಶೂನ್ಯ ಎಂದು ಮುನೀರ್ ಕಾಟಿಪಳ್ಳ ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕಮ್ಯುನಿಸ್ಟ್ ಹಿರಿಯ ಧುರೀಣ ಗಂಗಯ್ಯ ಅಮೀನ್ ಮಾತಾಡುತ್ತಾ, ಬಿಜೆಪಿ ಅಧಿಕಾರಕ್ಕೆ ಏರಿದ ಮೇಲೆ ಕಾರ್ಮಿಕ ವರ್ಗ ತನ್ನ ಧ್ವನಿಯನ್ನು ಕಳೆದುಕೊಂಡಿದೆ. ಒಂದು ಕಾಲದಲ್ಲಿ ಕಾರ್ಮಿಕರ ಪ್ರಬಲ ಹೋರಾಟದ ಕೇಂದ್ರವಾಗಿದ್ದ ಮಂಗಳೂರಲ್ಲಿ ಇಂದು ಕಾರ್ಮಿಕರನ್ನು ಜೀತದಾಳುಗಳಂತೆ ದುಡಿಸಿದರೂ ಕೇಳುವವರಿಲ್ಲ. ಜಾತಿ, ಧರ್ಮಗಳಂತಹ ಭಾವನಾತ್ಮಕ ವಿಷಯಗಳನ್ನು ತಂದು ಹೋರಾಟಗಳು ಮೇಲೇಳದಂತೆ ಹತ್ತಿಕ್ಕಲಾಗುತ್ತಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸೋಲಿಸುವುದೇ ದುಡಿಯುವ ವರ್ಗದ ಆದ್ಯತೆ ಎಂದು ಹೇಳಿದರು.
ಸಿಪಿಐಎಂ ಗುರುಪುರ ವಲಯ ಕಾರ್ಯದರ್ಶಿ ಸದಾಶಿವ ದಾಸ್, ಮುಖಂಡರಾದ ನೋಣಯ್ಯ ಗೌಡ, ಮನೋಜ್ ವಾಮಂಜೂರು, ವಸಂತಿ ಕುಪ್ಪೆಪದವು ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.







.jpeg)

