ಅತೀಕ್, ಸಹೋದರನ ಹತ್ಯೆ: ಉತ್ತರ ಪ್ರದೇಶ ಸರಕಾರ ತನ್ನ ಕರ್ತವ್ಯದಲ್ಲಿ ವಿಫಲಗೊಂಡಿದೆ ಎಂದ ನ್ಯಾ. ಮಾಥೂರ್
"ಈ ದೇಶದಲ್ಲಿ ಫ್ಯಾಸಿಸಂ ಅತ್ಯಂತ ವೇಗವಾಗಿ ಮುನ್ನಡೆಯುತ್ತಿದೆ"

ಲಕ್ನೋ: ಪೊಲೀಸರು ಮತ್ತು ಮಾಧ್ಯಮ ಪ್ರತಿನಿಧಿಗಳ ಉಪಸ್ಥಿತಿಯ ನಡುವೆಯೇ ಅತೀಕ್ ಅಹ್ಮದ್ ಮತ್ತು ಆತನ ಸೋದರ ಅಶ್ರಫ್ ಹತ್ಯೆ ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಕುರಿತು ಗಂಭೀರ ಸಮಸ್ಯೆಗಳನ್ನು ಸೂಚಿಸುತ್ತಿದೆ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶ ನ್ಯಾ.ಗೋವಿಂದ ಮಾಥೂರ್ ಅವರು ಬೆಟ್ಟು ಮಾಡಿದ್ದಾರೆ.
ಸ್ಥಳದಲ್ಲಿ ಹಾಜರಿದ್ದ ಮಾಧ್ಯಮ ಪ್ರತಿನಿಧಿಗಳು ಚಿತ್ರೀಕರಿಸಿರುವ ಘಟನೆಯ ವೀಡಿಯೊ ಹೇಗೆ ಹೆಚ್ಚಿನ ಭದ್ರತೆಯಿಲ್ಲದೆ ಬೇಜವಾಬ್ದಾರಿಯಿಂದ ಅವರಿಬ್ಬರನ್ನೂ ವ್ಯೆದ್ಯಕೀಯ ತಪಾಸಣೆಗೆ ಕರೆದೊಯ್ಯಲಾಗಿತ್ತು ಎನ್ನುವುದನ್ನು ಬಹಿರಂಗೊಳಿಸಿದೆ ಎಂದು ಅವರು thequint.com ಸುದ್ದಿಜಾಲತಾಣ ನಲ್ಲಿ ಬರೆದಿದ್ದಾರೆ.
ಅತೀಕ್ ತನಗೆ ಜೀವ ಬೆದರಿಕೆಯಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದ ಮತ್ತು ಸರ್ವೋಚ್ಚ ನ್ಯಾಯಾಲಯದಿಂದ ರಕ್ಷಣೆಯನ್ನು ಕೋರಿದ್ದ. ನ್ಯಾಯಾಲಯವೂ ‘ಸರಕಾರವು ನಿನ್ನ ಕಾಳಜಿಯನ್ನು ವಹಿಸಲಿದೆ’ ಎಂದು ಮೌಖಿಕವಾಗಿ ಆತನಿಗೆ ತಿಳಿಸಿತ್ತು ಎನ್ನುವುದನ್ನು ನೆನಪಿಸಿರುವ ನ್ಯಾ.ಮಾಥೂರ್, ಉತ್ತರ ಪ್ರದೇಶ ಸರಕಾರವು ಅದನ್ನು ಮಾಡುವಲ್ಲಿ ವಿಫಲಗೊಂಡಿದೆ ಎಂದು ಹೇಳಿದ್ದಾರೆ.
ಈ ಘಟನೆಯು ಹಲವು ಜ್ವಲಂತ ಪ್ರಶ್ನೆಗಳನ್ನೆತ್ತಿದೆ ಮತ್ತು ಪೊಲೀಸರು ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳಲೇಬೇಕಿದೆ ಎಂದಿದ್ದಾರೆ ನ್ಯಾ.ಮಾಥೂರ್.
ಕೊಲ್ಲಲ್ಪಟ್ಟಿರುವ ಇಬ್ಬರು ವ್ಯಕ್ತಿಗಳು ಕುಖ್ಯಾತ ಕ್ರಿಮಿನಲ್ಗಳಾಗಿದ್ದರು ಮತ್ತು ಅವರನ್ನು ಭಾರೀ ಭದ್ರತೆಯೊಂದಿಗೆ ಸಾಬರಮತಿ ಜೈಲಿನಿಂದ ಪ್ರಯಾಗರಾಜ್ಗೆ ತರಲಾಗಿತ್ತು. ದಾಳಿಕೋರರು ಏಕಾಏಕಿ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಹಂತದಲ್ಲಿ ಅವರ ಭದ್ರತೆಯನ್ನು ದುರ್ಬಲಗೊಳಿಸಿದ್ದು ಏಕೆ? ಯಾವುದೇ ಭದ್ರತಾ ಎಚ್ಚರಿಕೆ ವಹಿಸದೆ ಬೇಜವಾಬ್ದಾರಿಯಿಂದ ಅವರನ್ನು ವೈದ್ಯಕೀಯ ತಪಾಸಣೆಗೆ ಹೇಗೆ ಕರೆದೊಯ್ಯಲಾಗಿತ್ತು? ಅದಕ್ಕಾಗಿ ಸೂಚನೆಗಳನ್ನು ನೀಡಿದ್ದು ಯಾರು?
ಇವು ಕೆಲವು ಪ್ರಮುಖ ಪ್ರಶ್ನೆಗಳಾಗಿದ್ದು,ರಾಜ್ಯದ ಅಧಿಕಾರಿಗಳು ಇವುಗಳನ್ನು ಪರಿಶೀಲಿಸಲೇಬೇಕು ಎಂದು ನ್ಯಾ.ಮಾಥೂರ್ ಒತ್ತಿ ಹೇಳಿದ್ದಾರೆ.
ಅತೀಕ್ ಮತ್ತು ಅಶ್ರಫ್ ಹತ್ಯೆಯ ಬಳಿಕ ಮೂವರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈಗ ಅವರು ಎಲ್ಲ ಗಂಭೀರತೆಯೊಂದಿಗೆ ಪ್ರಕರಣದ ತನಿಖೆಯನ್ನು ನಡೆಸಬೇಕು. ಇದಕ್ಕೆ ಜವಾಬ್ದಾರರಾದ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮವನ್ನು ತೆಗೆದುಕೊಳ್ಳಬೇಕು ಮತ್ತು ತಕ್ಷಣವೇ ನ್ಯಾಯಾಂಗ ವಿಚಾರಣೆಯನ್ನು ಆರಂಭಿಸಬೇಕು ಎಂದು ಆಗ್ರಹಿಸಿರುವ ನ್ಯಾ. ಮಾಥೂರ್, ಈ ದೇಶದಲ್ಲಿ ಫ್ಯಾಸಿಸಂ ಅತ್ಯಂತ ವೇಗವಾಗಿ ಮುನ್ನಡೆಯುತ್ತಿದೆ ಮತ್ತು ಬೃಹತ್ ಹೋರಾಟ ಮುಂದಿದೆ ಎಂದಿದ್ದಾರೆ.







