ಎ.17ರಂದು ನಾಮಪತ್ರ ಸಲ್ಲಿಕೆ, ಪ್ರಣಾಳಿಕೆ ಬಿಡುಗಡೆ: ಪ್ರಸಾದ್ ರಾಜ್ ಕಾಂಚನ್

ಉಡುಪಿ: ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎ.17ರಂದು ನಾಮಪತ್ರ ಸಲ್ಲಿಸಿ, ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗುವುದು ಎಂದು ಪ್ರಸಾದ್ ರಾಜ್ ಕಾಂಚನ್ ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿ, ಆ ಬಳಿಕ ಪಾದಯಾತ್ರೆ ಮೂಲಕ ತಾಲೂಕು ಕಚೇರಿಗೆ ತೆರಳಿ ಬೆಳಗ್ಗೆ 11.15ಕ್ಕೆ ನಾಮಪತ್ರ ಸಲ್ಲಿಸಲಾಗುವುದು. ಈ ಸಂದರ್ಭದಲ್ಲಿ 3000ಕ್ಕೂ ಅಧಿಕ ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ ಎಂದರು.
ಉಡುಪಿ ವಿಧಾನಸಭಾ ಕ್ಷೇತ್ರ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಒಳಗೊಂಡಿರುವ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು. ಮುಂದಿನ 50 ವರ್ಷಗಳ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ವಿಷನ್ ಪ್ಲಾನ್ ರೂಪಿಸಿದ್ದು, ಮೀನುಗಾರಿಕಾ ಕ್ಷೇತ್ರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಜತೆಗೆ ಆರ್ಥಿಕತೆ ಚೇತರಿಕೆಗೆ ಯೋಜನೆ ರೂಪಿಸಲಾಗುವುದು. ಮೂಲಸೌಕರ್ಯ ಸುಧಾರಣೆ, ಧಾರ್ಮಿಕ ಹಾಗೂ ಬೀಚ್ ಟೂರಿಸಂ ಅಭಿವೃದ್ಧಿ ಪಡಿಸಿ ಹೆಚ್ಚು ಉದ್ಯೋಗ ಸೃಷ್ಟಿಸುವ ಯೋಜನೆಗಳನ್ನು ಹಾಕಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಗುಡಿ ಕೈಗಾರಿಕೆಗೆ ಉತ್ತೇಜನ ಕೊಟ್ಟು ಪ್ರತಿ ಮನೆಯನ್ನು ಆರ್ಥಿಕ ಸ್ವಾವಲಂಬಿ ಮಾಡುವ ಉದ್ದೇಶವಿದೆ. ಉಡುಪಿಗೆ ಸರಕಾರಿ ಮೆಡಿಕಲ್ ಕಾಲೇಜು, ಮರೀನಾ ಎಂಜಿನಿಯರಿಂಗ್ ಕಾಲೇಜು, ಸಂಶೋಧನಾ ಕೇಂದ್ರ ಸ್ಥಾಪಿಸುವ ಬಗ್ಗೆ ಚಿಂತಿಸಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ವಕ್ತಾರ ಭಾಸ್ಕರ್ ರಾವ್ ಕಿದಿಯೂರು, ಮುಖಂಡ ಅಮೃತ್ ಶೆಣೈ ಉಪಸ್ಥಿತರಿದ್ದರು.







