ಮಂಗಳೂರು: ಕೆಲಸ ಕೊಡಿಸುವುದಾಗಿ ಹೇಳಿ ವಂಚನೆ; ಪ್ರಕರಣ ದಾಖಲು

ಮಂಗಳೂರು, ಎ.16: ಪಾರ್ಟ್ ಟೈಮ್ ಜಾಬ್ ಕೊಡಿಸುವುದಾಗಿ ಹೇಳಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ಲಕ್ಷಾಂತರ ರೂ. ವಂಚನೆ ಮಾಡಿರುವ ಬಗ್ಗೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫಲ್ಗುಣಿ ಎಂಬ ಹೆಸರಿನ ಟೆಲಿಗ್ರಾಂ ಖಾತೆಯಿಂದ ಪಾರ್ಟ್ ಟೈಮ್ ಜಾಬ್ ಬಗ್ಗೆ ಬಂದ ಸಂದೇಶದ ಬಗ್ಗೆ ಪಿರ್ಯಾದಿ ದಾರರು ಮಾಹಿತಿ ವಿಚಾರಿಸಿದ್ದಾರೆ. ಇದಕ್ಕೆ ಆರೋಪಿಯು ಆನ್‌ಲೈನ್ ಮೂವಿ ಟಿಕೆಟ್ ರೇಟಿಂಗ್ ಉದ್ಯೋಗವಿದೆ ಎನ್ನುತ್ತಾ ಆ್ಯಪ್‌ವೊಂದನ್ನು ಇನ್ಸ್ಟಾಲ್ ಮಾಡಿ, ಖಾತೆಯನ್ನು ತೆರೆದು ಅದರಲ್ಲಿ ಪ್ರಸಾರವಾಗುವ ವೀಡಿಯೋ ನೋಡಿ ರೇಟಿಂಗ್ ಹಾಕಿ ಕಮೀಷನ್ ಹಣ ಪಡೆದುಕೊಳ್ಳಬಹುದು ಎಂದಿದ್ದಾರೆ ಎನ್ನಲಾಗಿದೆ. ಅದರಂತೆ ಆರೋಪಿ ಕಳುಹಿಸಿದ ಲಿಂಕ್ ಮೂಲಕ ಆ್ಯಪ್‌ನ್ನು ಮೊಬೈಲ್‌ನಲ್ಲಿ ಇನ್ಸ್ಟಾಲ್ ಮಾಡಿ ತನ್ನ ಮೊಬೈಲ್ ನಂಬರ್ ನಮೂದಿಸಿ ಖಾತೆಯನ್ನು ತೆರೆದು ವೀಡಿಯೋ ನೋಡಿ ರೇಟಿಂಗ್ ನೀಡಿದ್ದಾರೆ. ಆವಾಗ ಫಿರ್ಯಾದಿಗೆ 1 ಸಾವಿರ ರೂ. ಕಮಿಷನ್ ಸಿಕ್ಕಿದೆ. ನಂತರ ಪಾರ್ಟ್‌ಟೈಮ್ ಜಾಬ್ ಮುಂದುವರಿಸಲು 10,500 ರೂ. ಪಾವತಿಸುವಂತೆ ಟೆಲಿಗ್ರಾಂ ಮೂಲಕ ಸಂದೇಶ ಕಳುಹಿಸಿದ ಮೇರೆಗೆ ಫಿರ್ಯಾದಿದಾರರು ಆರೋಪಿಯ ಬ್ಯಾಂಕ್ ಖಾತೆಗೆ 10,500 ರೂ. ಪಾವತಿಸಿದ್ದಾರೆ. ಬಳಿಕ ಹೆಚ್ಚಿನ ಕಮಿಷನ್ ಪಡೆಯಲು 29,936 ರೂ. ಪಾವತಿಸುವಂತೆ ತಿಳಿಸಿರುತ್ತಾರೆ. ಅದನ್ನೂ ನಂಬಿ ಪುನಃ ಅದೇ ದಿನ ಆರೋಪಿಯ ಖಾತೆಗೆ 29,936 ರೂ. ಜಮಾ ಮಾಡಿರುತ್ತಾರೆ. ಬಳಿಕ ಫಿರ್ಯಾದಿದಾರರು ಆ್ಯಪ್ ಮೂಲಕ ವೀಡಿಯೋ ನೋಡಿ ರೇಟಿಂಗ್ ಹಾಕಲು ಪ್ರಯತ್ನಿಸಿದಾಗ ಆರೋಪಿಯು ಮತ್ತೆ 74,465 ರೂ. ಬೇಡಿಕೆ ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ನಾನಾ ಹಂತದಲ್ಲಿ ಫಿರ್ಯಾದಿದಾರರು 1,14,901 ರೂ.ಕಳೆದುಕೊಂಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಮುಹಮ್ಮದ್ ನೆಲ್ಲಿಕಾರ್ ಎಂಬವರು ಕನ್ಸಲ್ಟಿಂಗ್ ಕೆಲಸ ಮಾಡಿಕೊಂಡಿದ್ದು, ಅಪರಿಚಿತ ವ್ಯಕ್ತಿಯು ಮುಹಮ್ಮದ್ ಅವರ ವಾಟ್ಸ್‌ಆ್ಯಪ್ ಖಾತೆಗೆ ಪಾರ್ಟ್ ಟೈಂ ಜಾಬ್ ಬಗ್ಗೆ ಸಂದೇಶ ಕಳುಹಿಸಿದ್ದಾರೆ. ಬಳಿಕ ಟೆಲಿಗ್ರಾಮ್ ಲಿಂಕ್ ಕಳುಹಿಸಿ ಹಣವನ್ನು ಹೂಡಿದರೆ ಆನ್‌ಲೈನ್ ಮೂಲಕ ದ್ವಿಗುಣದ ಟಾಸ್ಕ್ ಕಂಪ್ಲೀಟ್ ಮಾಡಲು ಸೂಚಿಸಿದ್ದಾರೆ. ಆರೋಪಿಯು ಫಿರ್ಯಾದಿಯ ಬಳಿ ಪ್ರತಿ ಟಾಸ್ಕ್‌ಗೆ 70 ರೂ. ಹಣವನ್ನು ಹಾಕುವುದಾಗಿ ತಿಳಿಸಿರುತ್ತಾರೆ. ಈ ರೀತಿ 2-3 ದಿನ ಆರೋಪಿಯು ಇನ್ನೊಂದು ಟಾಸ್ಕ್ ಅಂತ 2 ಸಾವಿರ ರೂ. ಪಾವತಿಸಿದರೆ 20 ಲಾಭ ಕೊಡುತ್ತೇವೆ, ದೊಡ್ಡ ಮೊತ್ತ ಕಳುಹಿಸಿದರೆ ಇನ್ನೂ ಹೆಚ್ಚಿನ ಲಾಭ ಕೊಡುತ್ತೇವೆ ಎಂದು ನಂಬಿಸಿ 2,400 ರೂ.ವನ್ನು ಫಿರ್ಯಾದಿದಾರರ ಖಾತೆಗೆ ವರ್ಗಾಯಿಸಿರುತ್ತಾರೆ. ಇದನ್ನು ನಂಬಿದ ಫಿರ್ಯಾದಿದಾರರು ಹಂತ ಹಂತವಾಗಿ 5,52,800 ರೂ. ಪಾವತಿಸಿದ್ದಾರೆ. ಆ ಬಳಿಕ ತಾನು ಮೋಸ ಹೋಗಿರುವುದು ತಿಳಿದು ಬಂದಿರುವುದಾಗಿ ಮುಹಮ್ಮದ್ ನೆಲ್ಲಿಕಾರು ಸೈಬರ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.