ಸಿಎಂ ಯಾರಾದರೂ ನನಗೆ ಅಭ್ಯಂತರವಿಲ್ಲ, ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು: ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ‘ನಿಮ್ಮಲ್ಲಿ ಯಾರೇ ಮುಖ್ಯಮಂತ್ರಿಯಾದರೂ ನನಗೆ ಅಭ್ಯಂತರವಿಲ್ಲ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಬೇಕು. ಜನಪರ ಕಾರ್ಯಕ್ರಮ ಜಾರಿಯಾಗಬೇಕು. ಶಾಸಕರು ಹಾಗೂ ಹೈಕಮಾಂಡ್ ತೀರ್ಮಾನದಂತೆ ಮುಖ್ಯಮಂತ್ರಿ ಆಯ್ಕೆಯಾಗುತ್ತಾರೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ರವಿವಾರ ಕೋಲಾರದಲ್ಲಿ ನಡೆದ ‘ಜೈ ಭಾರತ್’ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ನೀವು ಜನರ ಬಗ್ಗೆ ಯೋಚಿಸಿ, ಮಿಕ್ಕ ವಿಚಾರ ಹೈಕಮಾಂಡ್‍ಗೆ ಬಿಟ್ಟುಬಿಡಿ. ನೀವೆಲ್ಲ ಒಟ್ಟಾಗಿ ಕಾಂಗ್ರೆಸ್ ಪಕ್ಷಕ್ಕೆ ವಿಧಾನಸಭೆ ಚುನಾವಣೆಯಲ್ಲಿ 150-160 ಸೀಟು ನೀಡಬೇಕು. ಈ ಹಿಂದೆ ನಾವು ಈ ಸಾಧನೆ ಮಾಡಿದ್ದೇವೆ’ ಎಂದು ನುಡಿದರು.
‘ಡಬಲ್ ಇಂಜಿನ್ ಸರಕಾರ ಒಂದು ಯೋಜನೆ ನೀಡುತ್ತಿಲ್ಲ. ನಮ್ಮ ಕಾರ್ಯಕ್ರಮದ ಯೋಜನೆ, ರೈಲು ಮಾರ್ಗಕ್ಕೆ ಇವರು ಹಸಿರು ಬಾವುಟ ತೋರಿಸಿ ನಮ್ಮ ಯೋಜನೆ ಎಂದು ಹೇಳುತ್ತಿದ್ದಾರೆ. ಹಳೇ ಡಬ್ಬಿಗೆ ಹೊಸ ಬಣ್ಣ ಬಳಿದು ತಮ್ಮ ಸಾಧನೆ ಎಂದು ಹೇಳುತ್ತಿದ್ದಾರೆ. ಈ ಸರಕಾರ ಕಿತ್ತೊಗೆಯದಿದ್ದರೆ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿಯಾಗುವುದಿಲ್ಲ. ಬೆಂಗಳೂರು ಬೆಳೆದಿದ್ದು ಕಾಂಗ್ರೆಸ್ ಸರಕಾರವಿದ್ದಾಗ, ಹೀಗಾಗಿ ನೀವೆಲ್ಲರೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು’ ಎಂದು ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದರು.
‘ಜನ ಮೋದಿ ಸರಕಾರಕ್ಕೆ ಬೇಸತ್ತಿದ್ದು, ಅದಕ್ಕಿಂತ ಹೆಚ್ಚಾಗಿ ರಾಜ್ಯ ಬಿಜೆಪಿ ಸರಕಾರದ ಶೇ.40 ಕಮಿಷನ್ ವಿರುದ್ಧ ಬೇಸತ್ತಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಬಿಜೆಪಿಯಿಂದ ಹೊರಬಂದು ಕಾಂಗ್ರೆಸ್ ಗೆಲ್ಲಿಸಲು ಮುಂದಾಗುತ್ತಿದ್ದಾರೆ. ರಾಜ್ಯದಲ್ಲಿ ಭ್ರಷ್ಟ ಸರಕಾರವಿದ್ದು, ಈ ಕಮಿಷನ್ ಭ್ರಷ್ಟಾಚಾರವನ್ನು ಮೋದಿ, ಅಮಿತ್ ಶಾ ಮೌನವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಿದ್ದಾರೆ. ಇಲ್ಲಿ ಬಿಇಎಲ್, ಬಿಎಚ್‍ಇಎಲ್ ಅನ್ನು ಮೋದಿ ಆರಂಭಿಸಿದರೇ, ಕೋಲಾರದಲ್ಲಿ ವಿದ್ಯುತ್, ರಸ್ತೆ ಮಾಡಿದ್ದು ಮೋದಿಯೇ? ಎಂದು ಪ್ರಶ್ನಿಸಿದರು.
ಪ್ರತಿವರ್ಷ 2ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. 9ವರ್ಷಗಳಲ್ಲಿ 18 ಕೋಟಿ ಉದ್ಯೇಗ ನೀಡಬೇಕಿತ್ತು. ಆದರೆ ಈ ಸರಕಾರ ಸಾರ್ವಜನಿಕ ಉದ್ದಿಮೆ ಖಾಸಗಿಯವರಿಗೆ ಮಾರಾಟ ಮಾಡಿ ಯುವಕರನ್ನು ಬೀದಿಗೆ ತಳ್ಳಿದೆ. ಸಂಸತ್ತಿನಲ್ಲಿ ನಾನು 1.28 ಗಂಟೆ ಮಾತನಾಡಿದ್ದು, ಅದರಲ್ಲಿ ಬಿಜೆಪಿ ಅವರು ಗಲಾಟೆ ಮಾಡಿದ್ದಾರೆ. ಆಗ ಮೋದಿ ಉಪಸ್ಥಿತರಿದ್ದರೂ, ಅವರ ಸಂಸದರನ್ನು ತಡೆಯುವ ಪ್ರಯತ್ನ ಮಾಡಲೇ ಇಲ್ಲ. ಕಾರಣ ಅವರೇ ಗಲಾಟೆ ಮಾಡಿಸಿದರು. ಇಡೀ ಅಧಿವೇಶನ ಅದಕ್ಕೆ ಬಲಿಯಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
‘ಪ್ರಧಾನಿ ವಿದೇಶಕ್ಕೆ ಹೋದಾಗ ಅದಾನಿ ಎಷ್ಟು ಬಾರಿ ಬಂದಿದ್ದರು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು. ಆದರೆ ಅವರ ವಿರುದ್ಧ ಇದೇ ಕೋಲಾರದಲ್ಲಿ ಮಾತನಾಡಿದ್ದ ಭಾಷಣದ ವಿಚಾರವಾಗಿ ಗುಜರಾತಿನಲ್ಲಿ ಎಫ್‍ಐಆರ್ ದಾಖಲಿಸಿ ಕೇವಲ 22 ದಿನಗಳಲ್ಲಿ ತೀರ್ಪು ಮಾಡಿ, 24 ತಾಸಿನಲ್ಲಿ ಅನರ್ಹತೆ ಮಾಡಿ, ಮನೆ ಖಾಲಿ ಮಾಡಲು ನೊಟೀಸ್ ನೀಡಿದ್ದಾರೆ. ಇದು ಬಿಜೆಪಿಯ ಸರ್ವಾಧಿಕಾರಿ ಧೋರಣೆ. ಹೀಗಾಗಿ ನಾವು ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಬೇಕಿದೆ. ಇದಕ್ಕಾಗಿ ನಾವೆಲ್ಲರೂ ಒಟ್ಟಾಗಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಮುಂದೆ ಸಾಗಬೇಕು. ಅನ್ಯಾಯವಾಗಿರುವುದರ ವಿರುದ್ಧ ಹೋರಾಟ ಮಾಡುವ ಶಕ್ತಿ ಇಲ್ಲದಿದ್ದರೆ, ಬದುಕಲು, ಸಂವಿಧಾನ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ಇವು ಉಳಿಯಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ‘ರಾಜ್ಯದಲ್ಲಿ ಬಿಜೆಪಿ ಸ್ಥಿತಿ ಏನಾಗುತ್ತಿದೆ ಎಂದು ನೀವು ನೋಡುತ್ತಿದ್ದೀರ. 47 ಜನ ಬಿಜೆಪಿ ನಾಯಕರು ಪಕ್ಷ ತೊರೆದು ಕಾಂಗ್ರೆಸ್ ಪಕ್ಷದ ಕಡೆ ಮುಖ ಮಾಡಿದ್ದಾರೆ. ಯಾರೆಲ್ಲಾ ಪಕ್ಷ ಸೇರುತ್ತಾರೆ ಎಂದು ಮುಂದೆ ಮಾತನಾಡುತ್ತೇನೆ ಎಂದು ಹೇಳಿದರು.
ಮೇ 10ಕ್ಕೆ ರಾಜ್ಯದಲ್ಲಿ ಕೇವಲ ಮತದಾನದ ದಿನ ಮಾತ್ರವಲ್ಲ, ರಾಜ್ಯದಲ್ಲಿ ಬದಲಾವಣೆ ತರುವ ದಿನ. ಭ್ರಷ್ಟ ಬಿಜೆಪಿ ಸರಕಾರವನ್ನು ಬಡಿದೋಡಿಸುವ ದಿನ, ನಿಮ್ಮ ಭವಿಷ್ಯ ಬರೆಯುವ ದಿನ, ಜನರ ಸಮಸ್ಯೆಗಳಿಗೆ ಮುಕ್ತಿ ನೀಡುವ ದಿನ, ರಾಜ್ಯವನ್ನು ಅಭಿವೃದ್ಧಿ ಹಾದಿಯಲ್ಲಿ ಮುನ್ನಡೆಸುವ ದಿನ, ಕರ್ನಾಟಕ ರಾಜ್ಯದ ಸ್ವಾಭಿಮಾನ ಉಳಿಸುವ ದಿನ. ಗೃಹಜ್ಯೋತಿ, ಗೃಹಲಕ್ಷ್ಮಿ ಉಳಿಸುವ ದಿನ, ಬಡವರಿಗೆ ಅನ್ನಭಾಗ್ಯ ನೀಡುವ ದಿನ, ನಿರುದ್ಯೋಗ ಯುವಕರಿಗೆ ನಿರುದ್ಯೋಗ ಭತ್ಯೆ ನೀಡುವ ದಿನ ಎಂದು ಶಿವಕುಮಾರ್ ಹೇಳಿದರು.







