2024ರ ಸಾರ್ವತ್ರಿಕ ಚುನಾವಣೆ: ಆರ್ಜೆಡಿ ಪೋಸ್ಟರ್ ನಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ನಿತೀಶ್ ಕುಮಾರ್

ಪಾಟ್ನಾ,ಎ.16: ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಿ ಪೋಸ್ಟರ್ ನ್ನು ಆರ್ಜೆಡಿ ಇತ್ತೀಚಿಗೆ ಪ್ರದರ್ಶಿಸಿತ್ತಾದರೂ,ಬಳಿಕ ಯಾವುದೇ ವಿವಾದವನ್ನು ತಪ್ಪಿಸಲು ಅದನ್ನು ಹಿಂದೆಗೆದುಕೊಂಡಿದೆ.
ಪ್ರಧಾನಿಯಾಗಲು ತನಗೆ ಆಸಕ್ತಿಯಿಲ್ಲ ಎಂದು ನಿತೀಶ್ ಒತ್ತಿ ಹೇಳಿದ್ದರೂ ಆರ್ಜೆಡಿಯು ಅವರನ್ನು ಪ್ರಧಾನಿಯನ್ನಾಗಿಸುವ ತನ್ನ ಆಕಾಂಕ್ಷೆಯನ್ನು ಪೋಸ್ಟರ್ ಗಳ ಮೂಲಕ ವ್ಯಕ್ತಪಡಿಸಿತ್ತು.
ಆರ್ಜೆಡಿ ರಾಜ್ಯ ಘಟಕದ ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿ ಪೂನಮ್ ರಾಯ್ ಅವರು ನಿತೀಶ್ ಪ್ರಧಾನಿ ಖುರ್ಚಿಯಲ್ಲಿ ಆಸೀನರಾಗಿದ್ದ ಪೋಸ್ಟರ್ ನ್ನು ಪಾಟ್ನಾದಲ್ಲಿಯ ಆರ್ಜೆಡಿ ಕಚೇರಿಯ ಬಳಿ ಪ್ರದರ್ಶಿಸಿದ್ದರು.
ನಿತೀಶ ಪ್ರಧಾನಿ ಖುರ್ಚಿಯಲ್ಲಿ ಆಸೀನರಾಗಿದ್ದನ್ನು ಹಾಗೂ ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್, ಎನ್ಸಿಪಿ ವರಿಷ್ಠ ಶರದ ಪವಾರ್, ಶಿವಸೇನೆ (ಠಾಕ್ರೆ ಬಣ) ನಾಯಕ ಉದ್ಧವ ಠಾಕ್ರೆ, ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆರ್ಜೆಡಿ ವರಿಷ್ಠ ಲಾಲುಪ್ರಸಾದ್ ಯಾದವ್ ಮತ್ತು ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಸೇರಿದಂತೆ ಪ್ರತಿಪಕ್ಷ ನಾಯಕರು ಅವರನ್ನು ಸುತ್ತುವರಿದಿದ್ದನ್ನು ಪೋಸ್ಟರ್ ತೋರಿಸಿತ್ತು. ತನ್ಮೂಲಕ ನಿತೀಶ್ ರನ್ನು ಪ್ರತಿಪಕ್ಷಗಳ ಒಮ್ಮತದ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಲಾಗಿತ್ತು.
ಪಕ್ಷದ ಕಚೇರಿಯ ಹೊರಗೆ ಯಾವುದೇ ಪೋಸ್ಟರ್ ಅಳವಡಿಸಲು ಆರ್ಜೆಡಿ ರಾಜ್ಯಾಧ್ಯಕ್ಷ ಜಗದಾನಂದ ಸಿಂಗ್ ಅವರ ಅನುಮತಿ ಅಗತ್ಯವಾಗಿದೆ. ಆದರೆ ಪೋಸ್ಟರ್ ಗೆ ಅವಕಾಶ ನಿರಾಕರಿಸಲಾಗಿತ್ತು ಮತ್ತು ಯಾವುದೇ ವಿವಾದವನ್ನು ಸೃಷ್ಟಿಸುವ ಮುನ್ನ ಅದನ್ನು ತೆಗೆದಿರುವಂತೆ ಕಾಣುತ್ತಿದೆ.







