ಇಸ್ರೇಲ್; ಸರಕಾರದ ವಿರುದ್ಧ ಮತ್ತೆ ಪ್ರತಿಭಟನೆ

ಟೆಲ್‍ಅವೀವ್, ಎ.16: ಇಸ್ರೇಲ್ ಸರಕಾರ ಪ್ರಸ್ತಾಪಿಸಿರುವ ನ್ಯಾಯಾಂಗ ಸುಧಾರಣೆ ಕ್ರಮಗಳನ್ನು ವಿರೋಧಿಸಿ ಶನಿವಾರ ರಾಜಧಾನಿ ಟೆಲ್‍ಅವೀವ್‍ನಲ್ಲಿ ಸಾವಿರಾರು ಇಸ್ರೇಲಿಯನ್ನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ನ್ಯಾಯಾಂಗ ಸುಧಾರಣೆ ಮಸೂದೆಯನ್ನು ಸದ್ಯಕ್ಕೆ ತಡೆಹಿಡಿದಿದ್ದು, ವಿಪಕ್ಷಗಳು ಹಾಗೂ ಇತರ ಸಂಘಟನೆಗಳ ಜತೆ ಚರ್ಚೆ ನಡೆಸಿದ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಾರ್ಚ್ 27ರಂದು ಘೋಷಿಸಿದ ಹಿನ್ನೆಲೆಯಲ್ಲಿ ಹಲವಡೆ ಪ್ರತಿಭಟನೆಯ ಕಾವು ತಗ್ಗಿತ್ತು. ಈ ಮಧ್ಯೆ, ಅಮೆರಿಕದ ಕ್ರೆಟಿಡ್ ರೇಟಿಂಗ್ ಏಜೆನ್ಸಿ `ಮೂಡೀಸ್'ನ ವರದಿಯಲ್ಲಿ ಇಸ್ರೇಲ್‍ನ ಆರ್ಥಿಕ ಬೆಳವಣಿಗೆಯ ಮುನ್ನೋಟವನ್ನು `ಧನಾತ್ಮಕ'ದಿಂದ `ಸ್ಥಿರ' ಹಂತಕ್ಕೆ ಇಳಿಸಿರುವುದು ಜನರಲ್ಲಿ ಕಳವಳಕ್ಕೆ ಕಾರಣವಾಗಿದೆ. `ಈ ಬದಲಾವಣೆಯು ಇಸ್ರೇಲ್‍ನ ಆಡಳಿತ ಹದಗೆಟ್ಟಿರುವುದರ ಸೂಚಕವಾಗಿದೆ. ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಕೂಲಂಕುಷವಾಗಿ ಪರಿಶೀಲಿಸುವ ಸರಕಾರದ ಪ್ರಸ್ತಾವನೆಯು ದೇಶದ ಆರ್ಥಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ' ಎಂದು `ಮೂಡೀಸ್'ನ ವರದಿ ಉಲ್ಲೇಖಿಸಿದೆ.
ಈ ವರದಿ ಪ್ರಕಟವಾಗುತ್ತಿದ್ದಂತೆಯೇ ಇಸ್ರೇಲ್‍ನ ಜನತೆ ಮತ್ತೆ ಬೀದಿಗಿಳಿದು ಪ್ರತಿಭಟನೆ ಮುಂದುವರಿಸಿದ್ದಾರೆ. `ದೇಶದ ಉಳಿವಿಗಾಗಿ, ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರತಿಭಟನೆ ನಡೆಸುವುದರ ಹೊರತು ಬೇರೆ ಆಯ್ಕೆ ತಮಗಿಲ್ಲ' ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.