ಕರ್ನಾಟಕದಲ್ಲಿ ಕಾಂಗ್ರೆಸ್‍ಗೆ 150 ಸ್ಥಾನ ಖಚಿತ: ರಾಹುಲ್ ಗಾಂಧಿ

ಬೆಂಗಳೂರು: ರಾಜ್ಯ ಬಿಜೆಪಿ ಸರಕಾರದ ಕಮಿಷನ್ ಹಾಗೂ ದುರಾಡಳಿತ ಶೀಘ್ರದಲ್ಲೇ ಕೊನೆಗೊಳ್ಳುವ ಜೊತೆಗೆ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೂ 150ಕ್ಕಿಂತ ಅಧಿಕ ಸ್ಥಾನ ಗೆಲ್ಲುವುದು ಖಚಿತವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ಮಿಲ್ಲರ್ಸ್ ರಸ್ತೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಕಟ್ಟಡ ಇಂದಿರಾ ಗಾಂಧಿ ಭವನ ಹಾಗೂ ಭಾರತ ಜೋಡೋ ಸಭಾಂಗಣ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ದೇಶ ವ್ಯಾಪಿ ಕಮಿಷನ್, ಭ್ರಷ್ಟಾಚಾರ ಎಂದರೆ, ಕರ್ನಾಟಕದ ಬಿಜೆಪಿ ಸರಕಾರವನ್ನು ನೆನೆಯುತ್ತಾರೆ. ಈ ರಾಜ್ಯದ ಮಾನ, ಹೆಗ್ಗಳಿಕೆಯನ್ನು ಮಣ್ಣುಪಾಲನೆ ಮಾಡಿದ್ದಾರೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಕರ್ನಾಟಕ ಕಾಂಗ್ರೆಸ್ ನಾಯಕರ ಒಗ್ಗಟ್ಟು ನೋಡಿ ಸಂತೋಷವಾಗಿದೆ. ಇಲ್ಲಿ ಸರಕಾರ ರಚನೆ ಮಾಡುವುದು ಖಚಿತವಾಗಿದೆ. ಹೀಗಾಗಿಯೇ, ಕಾಂಗ್ರೆಸ್ ಪಕ್ಷವೂ 150ಕ್ಕಿಂತ ಅಧಿಕ ಸ್ಥಾನ ಗೆಲ್ಲಲಿದೆ ಎಂದು ಹೇಳುತ್ತಿದ್ದೇನೆ ಎಂದು ರಾಹುಲ್ ನುಡಿದರು.
ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆಗಳಾದ ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಯೋಜನೆಗಳನ್ನು ಕಾಂಗ್ರೆಸ್ ಸರಕಾರ ಬಂದ ಮೊದಲ ದಿನ ಹಾಗೂ ಮೊದಲ ಸಚಿವ ಸಂಪುಟದಲ್ಲಿ ಜಾರಿ ಮಾಡಬೇಕು ಎಂದು ಸೂಚಿಸಿದ್ದೇನೆ. ಈ ಸಂದೇಶ ನಾಡಿನ ಜನತೆ, ಪ್ರಧಾನಮಂತ್ರಿಗಳಿಗೆ ರವಾನೆಯಾಗಬೇಕು ಎಂದು ಅವರು ಹೇಳಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಕಾಂಗ್ರೆಸ್ ನಾಯಕರು ಒಗ್ಗೂಡಿದರೆ ಯಾವ ರೀತಿಯೂ ಕಷ್ಟ ಇರುವುದಿಲ್ಲ. ಕರ್ನಾಟಕದಲ್ಲಿ ಈ ಮಾದರಿ ಮುಂದೆಯೂ ಹೇಗೆ ಇರಬೇಕು. ಇನ್ನೂ, ಡಿ.ಕೆ.ಶಿವಕುಮಾರ್ ಅವರು ಎಲ್ಲರನ್ನೂ ಜತೆಯಲ್ಲಿ ಕರೆದೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ಇಂದಿರಾ ಗಾಂಧಿ ಅವರು ಅಪಾರ ಕೊಡುಗೆ ನೀಡಿದ್ದಾರೆ. ಅವರ ಅನನ್ಯ ಸೇವೆಯೇ ಪಕ್ಷಕ್ಕೆ ಶ್ರೀರಕ್ಷೆಯಾಗಿದೆ. ಮುಂದೆ ನಮ್ಮ ಸರಕಾರ ಬಂದರೂ ಇಂದಿರಾ ಗಾಂಧಿ ನೆನೆಯುವ ಕೆಲಸ ಆಗಬೇಕು ಎಂದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದರೆ ನನ್ನ ಶಕ್ತಿಯೂ ಬಲಗೊಳ್ಳಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೆವಾಲ, ಕೆ.ಸಿ.ವೇಣುಗೋಪಾಲ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಸೇರಿದಂತೆ ಪ್ರಮುಖರಿದ್ದರು.
ಇಂದಿರಾ ಗಾಂಧಿ ಕಟ್ಟಡ ಹಿನ್ನೆಲೆ..!
2010ರಲ್ಲಿ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ 2014 ರಲ್ಲಿ ಶಂಕುಸ್ಥಾಪನೆ ನೆರವೇರಿತ್ತು. ಆಗ ಉದ್ದೇಶಿತ ಕಟ್ಟಡಕ್ಕೆ 12 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದ್ದು, ಆದರೆ ಕಟ್ಟಡ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದೆ ಇರುವುದರಿಂದ ಯೋಜನಾ ವೆಚ್ಚ ಹೆಚ್ಚಾಗುತ್ತಲೇ ಸಾಗಿತ್ತು.
2020ರ ಮಾರ್ಚ್‍ನಲ್ಲಿ ಡಿ.ಕೆ.ಶಿವಕುಮಾರ್ ಅಧಿಕಾರ ವಹಿಸಿಕೊಳ್ಳುವ ಹೊತ್ತಿಗೆ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ 6 ರಿಂದ 7 ಕೋಟಿ ರೂ ಹಣ ಬೇಕು ಎಂದು ಹೇಳಲಾಗುತ್ತಿತ್ತು. ಇದನ್ನು ಭರಿಸಲು ಕ್ರಮ ಕೈಗೊಂಡ ಶಿವಕುಮಾರ್, ಕಾಮಗಾರಿ ಪೂರ್ಣಗೊಳಿಸಿದ್ದರು. ನಂತರ ಒಂದೆರಡು ಕಾರ್ಯಕ್ರಮಗಳೂ ಸಹ ಇಲ್ಲಿ ನೆರವೇರಿದ್ದು, ಇದೀಗ ಅಧಿಕೃತವಾಗಿ ಉದ್ಘಾಟನೆ ಭಾಗ್ಯ ಪಡೆಯುತ್ತಿದೆ.
.jpg)







