ಬಡ ಕ್ರಿಕೆಟಿಗರ ಹಾಸ್ಟೆಲ್ ನಿರ್ಮಾಣಕ್ಕೆ ಲಕ್ಷಾಂತರ ರೂ. ನೀಡಿದ ರಿಂಕು ಸಿಂಗ್

ಚೆನ್ನೈ: ಇಂಡಿಯನ್ ಪ್ರಿಮಿಯರ್ ಲೀಗ್ 2008ರಲ್ಲಿ ಆರಂಭವಾದಾಗಿನಿಂದ ಹಲವು ಮಂದಿ ಉದಯೋನ್ಮುಖ ಪ್ರತಿಭೆಗಳನ್ನು ಬೆಳಕಿಗೆ ತಂದಿರುವುದು ಮಾತ್ರವಲ್ಲದೇ, ಅವರ ಪೈಕಿ ಹಲವು ಮಂದಿಯನ್ನು ಫ್ರಾಂಚೈಸಿಗಳಿಗೆ ದೊಡ್ಡ ಮೊತ್ತಕ್ಕೆ ಹರಾಜಾಗುವ ಅವಕಾಶ ಕಲ್ಪಿಸುವ ಮೂಲಕ ಲಕ್ಷಾಧೀಶರನ್ನಾಗಿ ಮಾಡಿದೆ.
ಆದರೆ ಇದುವರೆಗೂ ಭಾರತೀಯ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡದ ಯುವಕನೊಬ್ಬ, ತನ್ನ ಜೀವನದ ದಿಕ್ಕನ್ನೇ ಬದಲಿಸಿದ ಕ್ರೀಡೆಗೆ ಮರಳಿ ನೀಡುವ ನಿರ್ಧಾರಕ್ಕೆ ಬಂದಿದ್ದಾನೆ. ಐಪಿಎಲ್‍ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿರುವ ರಿಂಕು ಸಿಂಗ್ ಈ ನಿಟ್ಟಿನಲ್ಲಿ ಆದರ್ಶ ಉದಾಹರಣೆ ಎನಿಸಿದ್ದಾರೆ.
ಉತ್ತರ ಪ್ರದೇಶ ಮೂಲದ ಸಿಂಗ್, ಇತ್ತೀಚೆಗೆ ಐಪಿಎಲ್ ಪಂದ್ಯದಲ್ಲಿ ಕೊನೆಯ ಐದು ಎಸೆತಗಳಲ್ಲಿ ಸತತ ಐದು ಸಿಕ್ಸರ್ ಸಿಡಿಸಿ ತಂಡಕ್ಕೆ ಅಸಾಧ್ಯ ಗೆಲುವು ದೊರಕಿಸಿಕೊಡುವ ಮೂಲಕ ದೇಶಾದ್ಯಂತ ಮನೆಮಾತಾಗಿದ್ದರು. ರಿಂಕು ಅಧಿಕ ಗಳಿಕೆಯ ಆಟಗಾರರ ಪೈಕಿ ಒಬ್ಬರಲ್ಲದಿರಬಹುದು; ಆದರೂ ಆರ್ಥಿಕ ಸಂಕಷ್ಟದಿಂದ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗದ ಉದಯೋನ್ಮುಖ ಬಡ ಕ್ರಿಕೆಟಿಗರಿಗಾಗಿ ಹಾಸ್ಟೆಲ್ ನಿರ್ಮಾಣ ಮಾಡುವ ಘನ ಕಾರ್ಯದಿಂದ ಅವರನ್ನು ವಿಮುಖಗೊಳಿಸಲಿಲ್ಲ.
ಸಾಮಾನ್ಯ ಕುಟುಂಬದಲ್ಲಿ ಜನಿಸಿದ ರಿಂಕು ಅವರ ತಂದೆ ಎಲ್‍ಪಿಜಿ ಸಿಲಿಂಡರ್ ವಿತರಕ ಹಾಗೂ ಅವರ ಸಹೋದರ ಸೋನು ಅಟೋರಿಕ್ಷಾ ಚಾಲಕ. ಮತ್ತೊಬ್ಬ ಸಹೋದರ ಮುಕುಲ್ ಕೋಚಿಂಗ್ ಸೆಂಟರ್‍ನ ಸ್ವಚ್ಛತಾ ಸಿಬ್ಬಂದಿ. ಒಳ್ಳೆಯ ಬಲಗೈ ಆಫ್‍ಬ್ರೇಕ್ ಬೌಲರ್ ಆಗಿ ರೂಪುಗೊಳ್ಳುವ ಹಾದಿಯಲ್ಲಿ ತಾವು ಎದುರಿಸಿದ ಸಂಕಷ್ಟಗಳ ಅನುಭವದ ಹಿನ್ನೆಲೆಯಲ್ಲಿ ಅವರು, ಪ್ರತಿಭಾವಂತ ಬಡ ಉದಯೋನ್ಮುಖ ಕ್ರಿಕೆಟಿಗರಿಗೆ ನೆರವಾಗುವ ನಿರ್ಧಾರಕ್ಕೆ ಬಂದರು. ಅವರ ಕನಸು ನನಸಾಗಿಸುವ ನಿಟ್ಟಿನಲ್ಲಿ ಅವರಿಗೆ ಹಾಸ್ಟೆಲ್ ಸೌಲಭ್ಯ ಒದಗಿಸಲು ಅವರು ನಿರ್ಮಿಸಿದ ಹಾಸ್ಟೆಲ್ ಮುಂದಿನ ತಿಂಗಳು ಕಾರ್ಯಾರಂಭ ಮಾಡಲಿದೆ.
"ರಿಂಕು ಅವರ ಬಹುದಿನಗಳ ಕನಸು ನನಸಾಗುತ್ತಿದೆ" ಎಂದು ಅವರ ಬಾಲ್ಯದ ಕೋಚ್ ಅಲಿಗಢದ ಮಸೂದುಝ್ ಜಾಫರ್ ಅಮಿನಿ ಹೇಳುತ್ತಾರೆ.
ರಿಂಕು ಅವರಿಗೆ 12-13 ವರ್ಷ ಮೊದಲೇ ತರಬೇತಿ ನೀಡಲು ಆರಂಭಿಸಿದ ಜಾಫರ್, ಯುವ ಕ್ರಿಕೆಟಿಗನ ಏಳು- ಬೀಳುಗಳಿಗೆ ಸಾಕ್ಷಿಯಾದವರು. ಕೋಚ್ ಇದೀಗ ಅಲೀಗಢ ಕ್ರಿಕೆಟ್ ಸ್ಕೂಲ್ ಮತ್ತು ಅಕಾಡೆಮಿಯನ್ನು ನಡೆಸುತ್ತಿದ್ದಾರೆ. ಇದೇ ಜಾಗದಲ್ಲಿ ಹಾಸ್ಟೆಲ್ ನಿರ್ಮಾಣವಾಗಿದೆ.
ನಾಲ್ಕು ಮಂದಿಗೆ ವಾಸ್ತವ್ಯಕ್ಕೆ ಅವಕಾಶ ಇರುವ 15 ಕೊಠಡಿಗಳಿವೆ. ಒಂದು ಶೆಡ್ ಹಾಗೂ ಪೆವಿಲಿಯನ್ ಕೂಡಾ ನಿರ್ಮಿಸಲಾಗಿದೆ. ಪ್ರತ್ಯೇಕ ಶೌಚಾಲಯ, ಕ್ಯಾಂಟೀನ್ ಸೌಲಭ್ಯವೂ ಇದ್ದು, ಇದಕ್ಕೆ ತಗುಲಿದ ಎಲ್ಲ 50 ಲಕ್ಷ ರೂಪಾಯಿ ವೆಚ್ಚವನ್ನು ರಿಂಕು ಭರಿಸಿದ್ದಾರೆ ಎಂದು ಜಾಫರ್ ವಿವರಿಸಿದ್ದಾರೆ.