ಐಪಿಎಲ್ ನಲ್ಲಿ ಮಾತಿನ ಚಕಮಕಿ: ಕೆಕೆಆರ್ ನಾಯಕ ನಿತಿಶ್ ರಾಣಾ-ಮುಂಬೈನ ಹೃತಿಕ್ ಗೆ ಬಿಸಿಸಿಐ ವಾಗ್ದಂಡನೆ
ಸೂರ್ಯಕುಮಾರ್ ಯಾದವ್ ಗೆ 12 ಲಕ್ಷ ರೂ. ದಂಡ

ಹೊಸದಿಲ್ಲಿ: ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಹಂಗಾಮಿ ನಾಯಕ ನಿತೀಶ್ ರಾಣಾ ಹಾಗೂ ಮುಂಬೈ ಇಂಡಿಯನ್ಸ್ ಬೌಲರ್ ಹೃತಿಕ್ ಶೋಕೀನ್ ರವಿವಾರ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಮಾತಿನ ಚಕಮಕಿಯಲ್ಲಿ ತೊಡಗಿದ್ದರು.
ಲೀಗ್‌ನ 22ನೇ ಪಂದ್ಯದಲ್ಲಿ ಐಪಿಎಲ್‌ನ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಮುಂಬೈ ಹಾಗೂ ಕೆಕೆಆರ್ ಸ್ಟಾರ್‌ಗಳಿಗೆ ಬಿಸಿಸಿಐ ವಾಗ್ದಂಡನೆ ವಿಧಿಸಿದೆ.
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದ ಭಾರತೀಯ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರು ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ 12 ಲಕ್ಷ ರೂ. ದಂಡ ವಿಧಿಸಲಾಗಿದೆ.
ಎರಡು ಬಾರಿಯ ಚಾಂಪಿಯನ್ ಕೆಕೆಆರ್ ವಿರುದ್ಧ ಮುಂಬೈ ತಂಡ ತವರಿನ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಸೂರ್ಯಕುಮಾರ್ ಅವರಿಗೆ ಐಪಿಎಲ್ ದಂಡ ವಿಧಿಸಿದೆ. ಇದು ಮುಂಬೈನ ಈ ಋತುವಿನ ಮೊದಲ ಅಪರಾಧವಾಗಿರುವುದರಿಂದ, ಹಂಗಾಮಿ ನಾಯಕ ಸೂರ್ಯಕುಮಾರ್‌ಗೆ ಐಪಿಎಲ್‌ನ ನೀತಿ ಸಂಹಿತೆಯ ಅಡಿಯಲ್ಲಿ ಕನಿಷ್ಠ ಓವರ್‌ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ರೂ.12 ಲಕ್ಷ ದಂಡ ವಿಧಿಸಲಾಯಿತು.
ಏತನ್ಮಧ್ಯೆ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ರಾಣಾ ಅವರಿಗೂ ವಾಂಖೆಡೆ ಸ್ಟೇಡಿಯಮ್ ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದರಿಂದ ಅವರ ಪಂದ್ಯ ಶುಲ್ಕದ ಶೇಕಡಾ 25 ರಷ್ಟು ದಂಡ ವಿಧಿಸಲಾಗಿದೆ.
ಶ್ರೇಯಸ್ ಅಯ್ಯರ್ ಅವರ ಸ್ಥಾನಕ್ಕೆ ಸಂಪೂರ್ಣ ಐಪಿಎಲ್ 2023 ಸೀಸನ್‌ಗೆ ಕೆಕೆಆರ್ ನಾಯಕರಾಗಿ ನೇಮಕಗೊಂಡಿರುವ ರಾಣಾ, ಐಪಿಎಲ್‌ನ ನೀತಿ ಸಂಹಿತೆಯ ಆರ್ಟಿಕಲ್ 2.21 ರ ಅಡಿಯಲ್ಲಿ ಲೆವೆಲ್ 1 ಅಪರಾಧವನ್ನು ಒಪ್ಪಿಕೊಂಡಿದ್ದಾರೆ.







