ಮಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೊ ಚುನಾವಣಾ ಕಚೇರಿ ಉದ್ಘಾಟನೆ

ಮಂಗಳೂರು, ಎ.17: ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೊ ಚುನಾವಣಾ ಕಚೇರಿಯು ಕದ್ರಿ-ನಂತೂರು ರಸ್ತೆಯಲ್ಲಿರುವ ಒರೇನಿಯಾ ವಾಣಿಜ್ಯ ಸಂಕೀರ್ಣದಲ್ಲಿ ಸೋಮವಾರ ಕಾರ್ಯಾರಂಭಗೊಂಡಿತು.
ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತರಾದ ಪದ್ಮನಾಭ್ ಅಮೀನ್ ಮತ್ತು ಸದಾಶಿವ ಅಮೀನ್ ಅವರು ಇತರ ಗಣ್ಯರೊಂದಿಗೆ ದೀಪ ಬೆಳಗಿಸುವ ಮೂಲಕ ಚುನಾವಣಾ ಕಚೇರಿಯನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್‌ನ ಮಾಜಿ ಸದಸ್ಯ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಕೆ.ಎಸ್.ಮಸೂದ್ ಮಾತನಾಡಿ, "ಜೆ.ಆರ್.ಲೋಬೊ ಅವರನ್ನು ಶಾಸಕರನ್ನಾಗಿ ಮಾಡಲು ಪಕ್ಷದ ಎಲ್ಲಾ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಬೇಕು. ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರೂ ಲೋಬೋ ಅವರ ಗೆಲುವಿಗೆ ಅವಿರತವಾಗಿ ಶ್ರಮಿಸಬೇಕು’’ ಎಂದರು.
ಜೆ.ಆರ್. ಲೋಬೋ ಮಾತನಾಡಿ, ‘ಸಂವಿಧಾನ ಉಳಿಸಿ ಸಮಾಜದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಈ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಜನರು ಚುನಾವಣೆಗೆ ಆದ್ಯತೆ ನೀಡಬೇಕು. ನಗರದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳಿದ್ದರೂ ಯುವಕರು ಉದ್ಯೋಗದಿಂದ ವಂಚಿತರಾಗಿದ್ದಾರೆ. ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಲು ಹಾಗೂ ಅಭಿವೃದ್ಧಿಗೆ ಜನರು ಬದಲಾವಣೆ ತಂದು ರಾಜ್ಯದಲ್ಲಿ ಉತ್ತಮ ಸರಕಾರವನ್ನು ಆಯ್ಕೆ ಮಾಡಬೇಕು ಎಂದರು.
ಧರ್ಮಗುರುಗಳಾದ ರಿಯಾಝ್ ಫೈಝಿ ಮತ್ತು ಫಾದರ್ ರೋನ್ಸನ್ ಪಿಂಟೊ , ಪುರೋಹಿತ ವಿಶ್ವನಾಥ ಭಟ್ ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದರು.
ದಕ್ಷಿಣ ಕನ್ನಡ ಕಾಂಗ್ರೆಸ್ ಪಕ್ಷದ ಚುನಾವಣಾ ಸಂಯೋಜಕಿ ಶಿಭಾ ರಾಮಚಂದ್ರನ್, ಜೆ ಆರ್ ಲೋಬೋ ಲೋಬೊ ಪತ್ನಿ ಫಿಲೋಮಿನಾ ಲೋಬೊ, ಕಾಂಗ್ರೆಸ್‌ನ ಹಿರಿಯ ಧುರೀಣರಾದ ಸುರೇಶ್ ಬಲ್ಲಾಳ್, ಶಶಿಧರ್ ಹೆಗ್ಡೆ, ವಿಶ್ವಾಸ್ ದಾಸ್, ನವೀನ್ ಡಿ ಸೋಜ, ಸಬಿತಾ ಮಿಸ್ಕಿತ್, ಪ್ರಕಾಶ್ ಸಾಲಿಯಾನ್, ಟಿ ಕೆ ಸುಧೀರ್, ಎಂಜಿ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿ ಸೋಜ ಅತಿಥಿಗಳನ್ನು ಸ್ವಾಗತಿಸಿ, ವಂದಿಸಿದರು.