ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕೃಷ್ಣಮೂರ್ತಿ ಆಚಾರ್ಯ ನಾಮಪತ್ರ ಸಲ್ಲಿಕೆ

ಉಡುಪಿ: ಕಾಂಗ್ರೆಸ್‌ನಿಂದ ಟಿಕೆಟ್ ವಂಚಿತರಾದ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ ಇಂದು ಉಡುಪಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದರು.
ಬೆಳಗಿನ ಜಾವ ಉಡುಪಿ ಶ್ರೀಕೃಷ್ಣ ಮಠಕ್ಕೆ ತೆರಳಿ ದೇವರ ದರ್ಶನ ಪಡೆದು, ಕನ್ನರ್ಪಾಡಿ ದೇವಳದಲ್ಲಿ ದೇವರಿಗೆ ಹೂವಿನ ಪೂಜೆ ನೆರವೇರಿಸಿ, ಕಾರ್ಯಕರ್ತ ರೊಂದಿಗೆ ಪಾದಾಯಾತ್ರೆ ಮೂಲಕ ಉಡುಪಿ ತಾಲೂಕು ಕಚೇರಿಗೆ ಆಗಮಿಸಿದ ಉಡುಪಿ ತಾಲೂಕು ಚುನಾವಣಾಧಿಕಾರಿ ಸೀತಾ ಎಂ.ಸಿ. ಅವರಿಗೆ ನಾಮಪತ್ರ ಸಲ್ಲಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ವೆ ವರದಿ ಪ್ರಕಾರ ಉಡುಪಿ ಕ್ಷೇತ್ರಕ್ಕೆ ನನ್ನ ಹೆಸರೇ ಮುಂಚೂಣಿಯಲ್ಲಿತ್ತು. ಆದರೆ ಪಟ್ಟಿ ಬಿಡುಗಡೆಯಾಗುವ ಬೇರೆಯವರ ಹೆಸರು ಇತ್ತು. ಇದರಿಂದ ತುಂಬಾ ನೋವು ಆಯಿತು. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರ ಒತ್ತಾಯದಂತೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡರು ನನ್ನ ಜೊತೆ ಮಾತುಕತೆ ನಡೆಸಿದ್ದಾರೆ. ಅವರ ಮುಂದೆ ನನ್ನ ಬೇಡಿಕೆ ಇಟ್ಟಿದ್ದೇನೆ. ಬಿ ಪಾರ್ಮ್ ಕೊಡಿ ಇಲ್ಲವೇ ನಮ್ಮ ಬೇಡಿಕೆ ಈಡೇರಿಸಿ ಎಂದು ಹೇಳಿದ್ದೇನೆ. ಅದು ಈಡೇರಿಸಿದರೆ ವಾಪಾಸ್ಸು ಪಡೆಯುತ್ತೇನೆ. ಈ ಚುನಾವಣೆಯಲ್ಲಿ ನಾನು ಗೆಲ್ಲುವ ವಿಶ್ವಾಸ ಇದೆ. ಇಲ್ಲಿ ನನ್ನ ಮತ್ತು ಬಿಜೆಪಿಯ ಮಧ್ಯೆ ಸ್ಪರ್ಧೆ ಇರುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯೆ ಅಮೃತಾ ಕೃಷ್ಣಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ಯುವರಾಜ್, ವಕೀಲ ಸಂದೀಪ್, ಕೆಎಂಎಫ್ ಮಾಜಿ ಅಧ್ಯಕ್ಷ ರಾಜಶೇಖರ್ ಉಪಸ್ಥಿತರಿದ್ದರು.







