ಜಗದೀಶ್ ಶೆಟ್ಟರ್‌ರಿಂದ ದುಡುಕಿನ ನಿರ್ಧಾರ: ಅಣ್ಣಾಮಲೈ
ಕಾಪು, ಎ.17: ಶೆಟ್ಟರ್ ಕಾಂಗ್ರೆಸ್ ಸೇರುತ್ತಾರೆ ಎಂದು ಕನಸಿನಲ್ಲೂ ಅನಿಸಿರಲಿಲ್ಲ. ನಮ್ಮ ಪಕ್ಷವನ್ನು ಕಟ್ಟಿ ಬೆಳೆಸಿದವರಲ್ಲಿ ಜಗದೀಶ್ ಶೆಟ್ಟರ್ ಪ್ರಮುಖರಾಗಿದ್ದಾರೆ. ಅದರ ಜೊತೆ ಸಾಕಷ್ಟು ಅವಕಾಶವನ್ನು ಪಡೆದು ಕೊಂಡಿದ್ದಾರೆ. ಅವರು ಕಾಂಗ್ರೆಸ್ ಸೇರಿರುವುದು ನೋಡಿದರೆ ಮನಸ್ಸಿಗೆ ಸಂಕಟ ದುಗುಡ ಆಗಿದೆ. ಜಗದೀಶ್ ಶೆಟ್ಟರ್ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ಹೇಳಿದ್ದಾರೆ.
ಇಂದು ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತ ನಾಡುತಿದ್ದರು. ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಗೊಂಡರೂ ಲಿಂಗಾ ಯಿತ ಸಮುದಾಯದ ಮತ ಬಿಜೆಪಿ ಜೊತೆಗೆ ಇರುತ್ತದೆ. ಶೆಟ್ಟರ್ ಮತ್ತು ಸವದಿ ವ್ಯಕ್ತಿಗತವಾಗಿ ಪಕ್ಷ ಬಿಟ್ಟಿದ್ದಾರೆ. ನಮ್ಮ ಸರಕಾರ ಕೊಟ್ಟಿರುವ ಮೀಸಲಾತಿಯ ಹೆಚ್ಚಳ ನಮಗೆ ಚುನಾವಣೆಯಲ್ಲಿ ಅನುಕೂಲವಾಗಲಿದೆ. ಶೆಟ್ಟರ್ ನಿರ್ಧಾರ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದರು.
ಬಿಜೆಪಿ ಲಿಂಗಾಯತ ಅಭ್ಯರ್ಥಿಗಳಿಗೆ ದೊಡ್ಡ ಅವಕಾಶವನ್ನು ಬಿಜೆಪಿ ಕೊಟ್ಟಿದೆ. ಬಿಜೆಪಿ ಸಾಮಾಜಿಕ ನ್ಯಾಯದ ರೀತಿಯಲ್ಲಿ ಟಿಕೆಟ್ ಹಂಚಿಕೆ ಮಾಡಿದೆ. ಪ್ರಜಾಪ್ರಭುತ್ವ ಪ್ರಕಾರ ಎಲ್ಲಾ ಜಾತಿ ಸಮುದಾಯಗಳಿಗೆ ಅವಕಾಶ ಕೊಟ್ಟಿದೆ ಬಿಜೆಪಿ ಪಕ್ಷ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿಗೆ ಎಲ್ಲಾ ಅವಕಾಶಗಳನ್ನು ಕೊಟ್ಟಿದೆ. ಟಿಕೆಟ್ ಕೊಟ್ಟಿಲ್ಲ ಎಂದರೆ ಗಣನೆಗೆ ತೆಗೆದುಕೊಂಡಿಲ್ಲ ಎಂದು ಭಾವಿಸಬಾರದು. ಎಂಎಲ್‌ಎ ಟಿಕೆಟ್ ಸಿಗದವರು ಸಂಸದರಾಗಿ ಕೇಂದ್ರದಲ್ಲಿ ಸಚಿವರಾದ ಉದಾಹರಣೆಗಳಿವೆ. ಬಿಜೆಪಿ ಯಾರಿಗೂ ಈವರೆಗೆ ಅನ್ಯಾಯ ಮಾಡಿಲ್ಲ ಎಂದು ಅವರು ತಿಳಿಸಿದರು.
‘ಡಿಎಂಕೆ ವಿರುದ್ಧ 501ಕೋಟಿ ಮಾನನಷ್ಟ’
ಡಿಎಂಕೆ ನಾಯಕರ ಭ್ರಷ್ಟಾಚಾರ ಆರೋಪ ಮಾಡಿದಕ್ಕೆ ನನ್ನ ವಿರುದ್ಧ 500 ಕೋಟಿ ರೂ. ಮೊತ್ತದ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಅದೇ ರೀತಿ ನಾನು ಕೂಡ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಡಿಎಂಕೆ ವಿರುದ್ಧ ಇವತ್ತು 501ಕೋಟಿ ರೂ. ಮೊತ್ತದ ಮಾನನಷ್ಟ ಮೊಕದ್ದಮೆ ಹಾಕಿದ್ದೇನೆ. ಆ ಹಣವನ್ನು ಪಿಎಂ ಕೇರ್ ಫಂಡ್‌ಗೆ ನೀಡುವಂತೆ ಕೂಡ ಹೇಳಿದ್ದೇನೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ತಿಳಿಸಿದರು.
ಕರ್ನಾಟಕ ರಾಜಕೀಯಕ್ಕಿಂತ ತಮಿಳುನಾಡು ರಾಜಕೀಯ ವಿಭಿನ್ನವಾಗಿದೆ. ಇಲ್ಲಿ ತುಂಬಾ ಮೃದು ಆಗಿದ್ದರೆ ಅಲ್ಲಿ ಆಕ್ರಮಣಕಾರಿಯಾಗಿರುತ್ತದೆ. ತಮಿಳು ನಾಡು ರಾಜಕೀಯ ದಲ್ಲಿ ತುಂಬಾ ವೈಯಕ್ತಿಕವಾಗಿ ಹೋಗುತ್ತಾರೆ. ಅದಕ್ಕೆಲ್ಲ ಕಾರಣ ಅಲ್ಲಿನ ರಾಜಕೀಯ ಪಕ್ಷಗಳೇ ಮಾಧ್ಯಮವನ್ನು ನಡೆಸುತ್ತಿರುವುದು ಮತ್ತು ಸಿನೆಮಾವನ್ನು ನಿರ್ಮಾಣ ಮಾಡುತ್ತಿರುವುದು ಎಂದರು.