ಅಣ್ಣಾಮಲೈ ಹೆಲಿಕಾಪ್ಟರ್‌ನಲ್ಲಿ ಹಣದ ಬಂಡಲು: ವಿನಯ ಕುಮಾರ್ ಸೊರಕೆ ಆರೋಪ
ಸೊರಕೆಯವರಿಂದ ಹತಾಶೆ ಹೇಳಿಕೆ: ಅಣ್ಣಾಮಲೈ

ಉಡುಪಿ, ಎ.17: ಬಿಜೆಪಿ ಮುಖಂಡ ಅಣ್ಣಾಮಲೈ ಕಾಪುಗೆ ಆಗಮಿಸಿದ ಹೆಲಿಕಾಪ್ಟರ್ ನಿಗದಿತ ಸಮಯಕತ್ಕೆ ಮೊದಲೇ ಲ್ಯಾಂಡ್ ಆಗಿದೆ. ನನಗೆ ಬಂದ ಮಾಹಿತಿ ಪ್ರಕಾರ ಈ ಹೆಲಿಕಾಪ್ಟರ್‌ನಲ್ಲಿ ಹಣದ ಬಂಡಲು ರವಾನಿಸಲಾಗಿದೆ ಎಂದು ಮಾಜಿ ಸಚಿವ, ಕಾಪು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಗಂಭೀರ ಆರೋಪ ಮಾಡಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ವಿಚಾರವನ್ನು ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರ ಗಮನಕ್ಕೆ ತಂದಿದ್ದೇನೆ. ಜಿಲ್ಲಾಧಿಕಾರಿ ಮತ್ತು ಎಸ್ಪಿಯವರ ಬಗ್ಗೆ ನಮಗೆ ಭರವಸೆ ಇದೆ. ಹಣ ರವಾನೆಯಾಗಿದ್ದರೆ ಕೂಡಲೇ ಅದನ್ನು ವಶಪಡಿಸಿಕೊಳ್ಳುವ ಕಾರ್ಯ ಮಾಡಬೇಕು ಎಂದು ಒತ್ತಾಯಿಸಿದರು.
ಸೊರಕೆಯವರಿಂದ ಹತಾಶೆ ಹೇಳಿಕೆ: ಅಣ್ಣಾಮಲೈ
ನಾನು ಪ್ರಯಾಣಿಸಿದ ಹೆಲಿಕಾಫ್ಟರ್‌ನಲ್ಲಿ ಹಣ ರವಾನಿಸ ಲಾಗಿದೆ ಎಂಬ ಆರೋಪವನ್ನು ವಿನಯ ಕುಮಾರ್ ಸೊರಕೆ ಹತಾಶೆಯಿಂದ ಹೇಳಿದ್ದಾರೆ. ಅವರ ಹೇಳಿಕೆಯಿಂದ ಕಾಪುವಿನಲ್ಲಿ ಸುರೇಶ್ ಶೆಟ್ಟಿ ಗುರ್ಮೆ ಗೆಲುವು ಖಚಿತ ಎಂಬುದು ಗೊತ್ತಾಗುತ್ತದೆ ಎಂದು ಬಿಜೆಪಿ ರಾಜ್ಯ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ಹೇಳಿದ್ದಾರೆ.
ಕಾಪುವಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಹೆಲಿಕಾಫ್ಟರ್‌ನಲ್ಲಿ ಬಂದಿರುವುದು ನಿಜ. ಯಾಕೆಂದರೆ ಇಲ್ಲಿಂದ ಮತ್ತೆ ಐದು ಕಡೆಗಳಿಗೆ ಹೋಗಬೇಕಾಗಿದೆ ಮತ್ತು ಸರಿಯಾದ ಸಮಯದಲ್ಲಿ ಅಲ್ಲಿನ ಅಭ್ಯರ್ಥಿಗಳ ಜೊತೆ ಇರಬೇಕಾಗಿದೆ ಎಂದರು.
ಸೊರಕೆಯವರು ಎಲ್ಲರು ಅವರ ತರಹ ಇರುತ್ತಾರೆ ಎಂದು ಭಾವಿಸಿದ್ದಾರೆ. ಆದರೆ ನಾವು ಪ್ರಮಾಣಿಕರಾಗಿದ್ದೇವೆ. ನಾವು ಚುನಾವಣೆಯಲ್ಲಿ ಯಾರ ಬಗ್ಗೆಯೂ ತಪ್ಪಾಗಿ ಮಾತನಾಡುವುದಿಲ್ಲ. ನಮ್ಮ ಸಿದ್ಧಾಂತ, ಅವರ ಸಿದ್ಧಾಂತ, ನಮ್ಮ ಅಭ್ಯರ್ಥಿ, ಅವರ ಅಭ್ಯರ್ಥಿ ಮತ್ತು ನಮ್ಮ ಶಾಸಕರ ಕೆಲಸ ಆಧಾರದಲ್ಲಿ ಚುನಾವಣೆ ಎದುರಿಸುತ್ತೇವೆ. ಅದರ ಹೊರತು ಅಪ್ರಚಾರ ಮಾಡುವುದಿಲ್ಲ. ಸೊರಕೆಯವರು ಸೋಲಿಯ ಭಯದಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಅವರು ಟೀಕಿಸಿದರು.







