ಅಕ್ರಮವಾಗಿ ಬೆಂಗಳೂರಿನ ಮತದಾರರ ಮಾಹಿತಿಗಳನ್ನು ಪಡೆದು ವಿದೇಶಿ ಸರ್ವರ್ ಗಳಲ್ಲಿ ಶೇಖರಿಸಿಟ್ಟಿದ್ದ 'ಚಿಲುಮೆ'!
ಆಘಾತಕಾರಿ ಅಂಶ ಬಯಲು

ಬೆಂಗಳೂರು: ಐದು ತಿಂಗಳುಗಳ ಹಿಂದೆ ಡಿಜಿಟಲ್ ಪ್ಲ್ಯಾಟ್ ಫಾರ್ಮ್ ಗಳಾದ The News Minute (TNM) ಮತ್ತು 'ಪ್ರತಿಧ್ವನಿ' ಮೊದಲ ಬಾರಿಗೆ ಬಹಿರಂಗಗೊಳಿಸಿದ್ದ ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಮತದಾರರ ಮಾಹಿತಿಗಳ ಕಳ್ಳತನದ ಬಗ್ಗೆ ಚುನಾವಣಾ ಆಯೋಗವು ತನಿಖೆಯನ್ನು ನಡೆಸಿದೆ. ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ನಡೆಸಿರುವ ತನಿಖೆಯು TNM ತನ್ನ ವರದಿಯಲ್ಲಿ ಬಹಿರಂಗಗೊಳಿಸಿದ್ದ ಅಂಶಗಳನ್ನು ಎತ್ತಿಹಿಡಿದಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಅಧಿಕಾರಿಗಳು ಖಾಸಗಿ ಟ್ರಸ್ಟ್ ‘ಚಿಲುಮೆ ’ಗೆ ಮತದಾರರ ಮಾಹಿತಿಗಳನ್ನು ಸಂಗ್ರಹಿಸಲು ಅವಕಾಶ ನೀಡುವ ಮೂಲಕ ಅದಕ್ಕೆ ಕಾನೂನುಬಾಹಿರ ಮತ್ತು ಅನುಚಿತ ಅನುಕೂಲಗಳನ್ನು ಒದಗಿಸಿದ್ದರು ಮತ್ತು ಟ್ರಸ್ಟ್ ವಿರುದ್ಧ ಸಲ್ಲಿಸಲಾಗಿದ್ದ ದೂರನ್ನು ವಿಫಲಗೊಳಿಸಲೂ ಪ್ರಯತ್ನಿಸಿದ್ದರು ಎನ್ನುವುದನ್ನು ತನಿಖೆಯು ಬಹಿರಂಗಗೊಳಿಸಿದೆ.
ಆಯೋಗದ ತನಿಖೆಯು ಚಿಲುಮೆ ಶೈಕ್ಷಣಿಕ,ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಮತ್ತು ಬಿಜೆಪಿ ಸಚಿವ ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಬೆಂಗಳೂರಿನ ಪ್ರಮುಖ ಚಿತ್ರನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನಡುವಿನ ನಂಟನ್ನೂ ಬಯಲಿಗೆಳೆದಿದೆ.
ಆದರೆ ಚಿಲುಮೆ ಟ್ರಸ್ಟ್ ಸಂಗ್ರಹಿಸಿರುವ ದತ್ತಾಂಶಗಳು ಎಲ್ಲಿವೆ ಎನ್ನುವುದು ಸ್ಪಷ್ಟವಾಗಿಲ್ಲ. ಅದು ಚುನಾವಣಾ ಆಯೋಗದ ನಿಯಮಗಳನ್ನು ಉಲ್ಲಂಘಿಸಿ ವಿದೇಶಿ ಸರ್ವರ್ಗಳಲ್ಲಿ, ಬಹುಶಃ ಚೀನಿ ಅಥವಾ ಪೂರ್ವ ಐರೋಪ್ಯ ಸರ್ವರ್ಗಳಲ್ಲಿ ದಾಸ್ತಾನಾಗಿರಬಹುದು ಎಂದು ತನಿಖಾ ವರದಿಯು ಸೂಚಿಸಿದೆ.
ಆದರೆ ಕೆಲವು ಮಾಧ್ಯಮಗಳು ತನಿಖೆಯಲ್ಲಿ ಯಾವುದೇ ವಂಚನೆ ಅಥವಾ ದತ್ತಾಂಶ ಉಲ್ಲಂಘನೆ ಕಂಡು ಬಂದಿಲ್ಲ ಎಂದು ವರದಿ ಮಾಡಿವೆ.
ತನಿಖಾ ವರದಿಯಲ್ಲೇನಿದೆ?
2022,ನವಂಬರ್ nಲ್ಲಿ ಟಿಎನ್ಎಂ ಮತ್ತು ಪ್ರತಿಧ್ವನಿ ಚಿಲುಮೆ ಟ್ರಸ್ಟ್ನಿಂದ ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಮತದಾರರ ಮಾಹಿತಿ ಕಳ್ಳತನವನ್ನು ಜಂಟಿಯಾಗಿ ಬಯಲಿಗೆಳೆದಿದ್ದವು. ರವಿಕುಮಾರ ಕೃಷ್ಣಪ್ಪ ಸ್ಥಾಪಿಸಿದ್ದ ಟ್ರಸ್ಟ್ ಕ್ಷೇತ್ರ ಕಾರ್ಯಕರ್ತರನ್ನು ನಿಯೋಜಿಸುವ ಮೂಲಕ ಮತದಾರರ ಮಾಹಿತಿಗಳನ್ನು ಸಂಗ್ರಹಿಸಿತ್ತು. ಈ ಕಾರ್ಯಕರ್ತರು ಚುನಾವಣಾಧಿಕಾರಿಗಳ ಸೋಗಿನಲ್ಲಿ ಮತದಾರರನ್ನು ಸಂಪರ್ಕಿಸಿದ್ದರು. ಮತದಾರರ ಹಕ್ಕುಗಳ ಕುರಿತು ‘ಜಾಗೃತಿಯನ್ನು ಮೂಡಿಸಲು ’ಖಾಸಗಿ ಟ್ರಸ್ಟ್ಗೆ ಅವಕಾಶ ಕಲ್ಪಿಸಿದ್ದ ಸರಕಾರಿ ಆದೇಶಗಳ ಮೂಲಕ ಮತದಾರರ ಮಾಹಿತಿಗಳ ಕಳ್ಳತನವನ್ನು ಸಾಧ್ಯವಾಗಿಸಲಾಗಿತ್ತು.
ಚಿಲುಮೆ ಟ್ರಸ್ಟ್ ಬಿಬಿಎಂಪಿ ಜೊತೆಗಿನ ಒಪ್ಪಂದದ ನಿಯಮಗಳನ್ನು ದುರುಪಯೋಗಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಎನ್ಜಿಒ ಸಮನ್ವಯ ಟ್ರಸ್ಟ್ 2022, ಸೆ.20ರಂದು ಅದರ ವಿರುದ್ಧ ದೂರು ಸಲ್ಲಿಸಿತ್ತು. ಚಿಲುಮೆ ಟ್ರಸ್ಟ್ ತನ್ನ ಕ್ಷೇತ್ರ ಕಾರ್ಯಕರ್ತರಿಗೆ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಅಥವಾ ಬೂತ್ ಮಟ್ಟದ ಸಂಯೋಜಕರು (ಬಿಎಲ್ಸಿ) ಎಂಬ ನಕಲಿ ಗುರುತು ಚೀಟಿಗಳನ್ನು ನೀಡಿದೆ ಎಂದು ಸಮನ್ವಯ ತನ್ನ ದೂರಿನಲ್ಲಿ ಆರೋಪಿಸಿತ್ತು.
ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಪಾಲ್ಗೊಳ್ಳುವಿಕೆ ಕಾರ್ಯಕ್ರಮ (ಎಸ್ವಿಇಇಪಿ)ದ ನೋಡಲ್ ಅಧಿಕಾರಿ ಮತ್ತು ಬಿಬಿಎಂಪಿಯ ಮತ್ತು ವಿಶೇಷ ಆಯುಕ್ತ (ಚುನಾವಣೆ) ರಂಗಪ್ಪ ಅವರು ಜಿಲ್ಲಾ ಚುನಾವಣಾಧಿಕಾರಿಯೂ ಆಗಿದ್ದ ಬಿಬಿಎಂಪಿ ಆಯುಕ್ತ ತುಷಾರ ಗಿರಿನಾಥ ಅವರ ಗಮನಕ್ಕೆ ಈ ದೂರನ್ನು ತಂದಿರಲಿಲ್ಲ. 2022,ಅಕ್ಟೋಬರ್ ನ ಅಂತ್ಯದಲ್ಲಷ್ಟೇ ಚಿಲುಮೆ ವಿರುದ್ಧ ದೂರಿನ ಬಗ್ಗೆ ಗಿರಿನಾಥರಿಗೆ ಗೊತ್ತಾಗಿತ್ತು. ಚುನಾವಣಾ ಆಯೋಗದ ತನಿಖಾ ವರದಿಯಂತೆ ಚಿಲುಮೆ ಸ್ಥಾಪಕ ರವಿಕುಮಾರ ಕೃಷ್ಣಪ್ಪ ಅವರು ನ.3ರಂದು ದೂರನ್ನು ಹಿಂದೆಗೆದುಕೊಳ್ಳುವಂತೆ ಸಮನ್ವಯ ಟ್ರಸ್ಟ್ ನ ಮೇಲೆ ಒತ್ತಡ ಹೇರಿದ್ದರು. ರಂಗಪ್ಪ ಜೊತೆಗೆ ಚಿಲುಮೆ ಕ್ಷೇತ್ರ ಕಾರ್ಯಕರ್ತರಿಗೆ ನಕಲಿ ಗುರುತಿನ ಚೀಟಿಗಳನ್ನು ವಿತರಿಸಿದ್ದಕ್ಕಾಗಿ ಬೆಂಗಳೂರಿನ ಮಹದೇವಪುರ,ಚಿಕ್ಕಪೇಟೆ, ಶಿವಾಜಿನಗರ ಮತ್ತು ಆರ್.ಆರ್.ನಗರದ ನಾಲ್ವರು ಚುನಾವಣಾ ನೋಂದಣಿ ಅಧಿಕಾರಿಗಳ ವಿರುದ್ಧವೂ ತನಿಖೆಯು ದೋಷಾರೋಪವನ್ನು ಹೊರಿಸಿದೆ. ಕೆಆರ್ಪುರಂ ಚುನಾವಣಾ ನೋಂದಣಾಧಿಕಾರಿ 2029 ಜನವರಿಯಲ್ಲಿ ಯುವ ಮತದಾರರ ಪಟ್ಟಿಗಳನ್ನು ಅವರ ಫೋನ್ ನಂಬರ್ಗಳೊಂದಿಗೆ ಚಿಲುಮೆ ಟ್ರಸ್ಟ್ಗೆ ನೀಡಿದ್ದರು ಎನ್ನುವುದನ್ನು ತನಿಖೆಯು ಪತ್ತೆ ಹಚ್ಚಿದೆ.
2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್.ಪುರಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಂದೀಶ ರೆಡ್ಡಿ ಅವರು ಮತದಾರರ ಸಮೀಕ್ಷೆ ನಡೆಸಲು ಚಿಲುಮೆ ಟ್ರಸ್ಟ್ಗೆ 17.5 ಲಕ್ಷ ರೂ.ಗಳನ್ನು ನೀಡಿದ್ದರು ಎಂದು ಟಿಎನ್ಎಂ ಹಿಂದೆ ವರದಿ ಮಾಡಿತ್ತು. ರೆಡ್ಡಿಯವರನ್ನು ಪ್ರಶ್ನಿಸಿದಾಗ ತಾನು ಚಿಲುಮೆಗೆ ಹಣ ನೀಡಿದ್ದನ್ನು ಅವರು ಒಪ್ಪಿಕೊಂಡಿದ್ದಾರೆ. ಚಿಲುಮೆ ಟ್ರಸ್ಟ್ ಹೊಂಬಾಳೆ ಫಿಲ್ಮ್ಸ್ ಮತ್ತು ಸಚಿವ ಅಶ್ವತ್ಥನಾರಾಯಣ ನಡೆಸುತ್ತಿರುವ ಪ್ರತಿಷ್ಠಾನವೊಂದರೊಂದಿಗೆ ವಹಿವಾಟುಗಳನ್ನು ನಡೆಸಿತ್ತು ಎನ್ನುವುದು ತನಿಖೆಯಲ್ಲಿ ಬಯಲಿಗೆ ಬಂದಿದೆ.ಹೊಂಬಾಳೆ ಫಿಲ್ಮ್ಸ್ ನ ನಿರ್ದೇಶಕ ವಿಜಯ ಕಿರಗಂದೂರು ಅವರು ಅಶ್ವತ್ಥನಾರಾಯಣರ ಸೋದರ ಸಂಬಂಧಿಯಾಗಿದ್ದಾರೆ.
ಚಿಲುಮೆಯ ಕ್ಷೇತ್ರ ಕಾರ್ಯಕರ್ತರು ಮತದಾರರಿಂದ ಸಂಗ್ರಹಿಸಿದ್ದ ದತ್ತಾಂಶಗಳನ್ನು ಖಾಸಗಿ ಮೊಬೈಲ್ ಆ್ಯಪ್ ಡಿಜಿಟಲ್ ಸಮೀಕ್ಷಾಕ್ಕೆ ಅಪ್ಲೋಡ್ ಮಾಡಿದ್ದರು ಎನ್ನುವುದನ್ನು ಆಯೋಗದ ತನಿಖೆಯು ಪತ್ತೆ ಹಚ್ಚಿದೆ. ಡಿಜಿಟಲ್ ಸಮೀಕ್ಷಾ ಚುನಾವಣಾ ಆಯೋಗದ ಗರುಡ ಮತ್ತು ವೋಟರ್ ಹೆಲ್ಪ್ಲೈನ್ ಆ್ಯಪ್ನಂತಹ ಮತದಾರರ ನೋಂದಣಿ ಅಪ್ಲಿಕೇಷನ್ಗಳಿಗೆ ಬದಲಿಯಾಗಿದೆ ಎಂದು ಚಿಲುಮೆ ಘೋಷಿಸಿತ್ತು. ಆ್ಯಪ್ ನಲ್ಲಿ ಈಗಾಗಲೇ ಅಪ್ಲೋಡ್ ಮಾಡಲಾದ ದತ್ತಾಂಶಗಳು ವಿದೇಶಿ ಸರ್ವರ್ಗಳಲ್ಲಿ (ಬಹುಶಃ ಚೀನಿ ಅಥವಾ ಪೂರ್ವ ಯುರೋಪ್ನ) ಲಭ್ಯವಿದೆ ಎನ್ನಲಾಗಿದ್ದು, ಪೊಲೀಸರಿಂದ ಹಸ್ತಾಂತರಕ್ಕೆ ಮನವಿಗಳು ಬಾಕಿಯುಳಿದಿವೆ ಎಂದು ಅಮ್ಲಾನ್ ಬಿಸ್ವಾಸ್ ಅವರ ತನಿಖಾ ವರದಿಯು ಹೇಳಿದೆ.