ಮೂಡುಬಿದಿರೆ: ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ನಾಮಪತ್ರ ಸಲ್ಲಿಕೆ

ಮೂಡುಬಿದಿರೆ : ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಿಥುನ್ ರೈ ಸೋಮವಾರ ಇಲ್ಲಿನ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಮಹಮ್ಮಾಯಿ ದೇವರ ದರ್ಶನ ಪಡೆದ ಅವರು ತಾಸೆ, ಹುಲಿವೇಷಗಳ ಕುಣಿತ, ಚೆಂಡೆ, ವಾದ್ಯ ಘೋಷಗಳೊಂದಿಗೆ ಮೆರವಣಿಗೆಯಲ್ಲಿ ತೆರೆದ ಜೀಪಿನಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು.
ಅದಕ್ಕೂ ಮೊದಲು ಸ್ವರಾಜ್ಯ ಮೈದಾನದಲ್ಲಿ ಸಾರ್ವಜನಿಕ ಸಮಾವೇಶ ನಡೆಯಿತು. ದಿಕ್ಸೂಚಿ ಭಾಷಣ ಮಾಡಿದ ಕೆಪಿಸಿಸಿ ವಕ್ತಾರ ಹಾಗೂ ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೋಳಿ ‘ಬಿಜೆಪಿಯವರ ಬಾಯಿ ಬಡಾಯಿ. ಮಾತಾಡಿದ್ದು ಜಾಸ್ತಿ, ಮಾಡಿದ್ದು ಏನೂ ಇಲ್ಲ. ಎಲ್ಲದಕ್ಕೂ ಶ್ರಮ ನಮ್ಮದು, ಫೋಟೋ ಮಾತ್ರ ಮೋದಿಯದ್ದು’ ಎಂದು ವ್ಯಂಗ್ಯವಾಡಿದರು.
ಬೇಟಿ ಪಡಾವೋ, ಬೇಟಿ ಬಚಾವೊ ಅಂತ ಮೋದಿ ಘೋಷಿಸಿದ್ದರೆ ಈವತ್ತು ಬಿಜೆಪಿ ಮುಖಂಡರಾದ ರೇಣುಕಾಚಾರ್ಯ, ರಮೇಶ್ ಜಾರಕಿಹೊಳಿ ಮತ್ತಿತರರಿಂದ ಹೆಣ್ಣು ಮಕ್ಕಳನ್ನು ಬಚಾವು ಮಾಡುವ ಸಂದರ್ಭ ಒದಗಿ ಬಂದಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿವೃದ್ಧಿ ಕೇಳಬೇಡಿ. ಲವ್ ಜಿಹಾದ್ ಬಗ್ಗೆ ಮಾತಾಡಿ ಅಂತ ಹೇಳುತ್ತಿರುವುದು ಜನರಿಗೆ ಮಾಡುವ ದ್ರೋಹವಾಗಿದೆ. ಕಾಂಗ್ರೆಸಿಗರ ಹೃದಯದಲ್ಲಿ ರಾಮ, ಕೃಷ್ಣ, ಯೇಸು, ಅಲ್ಲಾಹ್ ಇದ್ದಾರೆ. ಆದರೆ ಬಿಜೆಪಿಗರ ರಕ್ತದಲ್ಲಿ ದ್ವೇಷ ರಾಜಕಾರಣ ಮಾತ್ರವಿರೋದು ಎಂದರು.
ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ ‘ಮಿಥುನ್ ರೈ ಅವರನ್ನು ಮೂಡುಬಿದಿರೆಗೆ ಅಭ್ಯರ್ಥಿಯನ್ನಾಗಿ ಆರಿಸಿದ್ದು ಕೆಪಿಸಿಸಿ ಅಲ್ಲ. ಮೂಡುಬಿದಿರೆಯ ಜನತೆಯೇ ಆಗಿದ್ದಾರೆ. ಮಿಥುನ್ ರೈಗೆ ಶೇ.40 ಕಮಿಷನ್ ದುಡ್ಡಿನ ಅಗತ್ಯ ಇಲ್ಲ. ಕಳೆದ 5 ವರ್ಷಗಳಲ್ಲಿ ಮೂಡುಬಿದಿರೆ ಕ್ಷೇತ್ರದಲ್ಲಿ ಬಿಜೆಪಿ ಮಾಡಿದ ಭ್ರಷ್ಟಾಚಾರವನ್ನು ಈ ಹಿಂದೆ ಯಾರೂ ಮಾಡಿಲ್ಲ. ಮಿಥುನ್ ರೈ ಗೆದ್ದರೆ ನಾವೆಲ್ಲರೂ ಶಾಸಕರಾದಂತೆ ಎಂದು ಹೇಳಿದರು.
ಅಭ್ಯರ್ಥಿ ಮಿಥುನ್ ರೈ ಮಾತನಾಡಿ ‘ಅಭಯಚಂದ್ರ ಜೈನ್ ಅವರು ಮಾಡಿದ ತ್ಯಾಗವನ್ನು ನಾವು ಯಾವತ್ತೂ ಮರೆಯಬಾರದು. ಯುವ ಕಾಂಗ್ರೆಸ್ ದಿನಗಳಿಂದ ಇಂದಿನವರೆಗೆ ಜೊತೆಗೆ ನಿಂತ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಗೆ, ತಿದ್ದಿ ಬೆಳೆಯಲು ಕಾರಣರಾದ ಹಿರಿಯರಿಗೆ, ರಾಜಕೀಯವಾಗಿ ಬೆಳೆಸಿದ ಎಲ್ಲರನ್ನೂ ಸ್ಮರಿಸುತ್ತೇನೆ’ ಎಂದರು.
ಅಭಯಚಂದ್ರರು ಕೃಷ್ಣನಾದರೆ ನಾನು ಅರ್ಜುನ. ನಮ್ಮೊಳಗೆ ವೈಮನಸ್ಸು ಉಂಟಾಗಿದೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಇಂತಹ ಯಾವುದೇ ಘಟನೆ ನಡೆದಿಲ್ಲ, ಮುಂದೆಯೂ ಆಗುವುದಿಲ್ಲ. ಕ್ಷೇತ್ರಕ್ಕೆ ಅಭಯಚಂದ್ರರ ಕೊಡುಗೆಯನ್ನು ಯಾರೂ ಮರೆಯುವಂತಿಲ್ಲ. ಮೂಡುಬಿದಿರೆ-ಮುಲ್ಕಿಯನ್ನು ಮಾದರಿಯನ್ನಾಗಿಸುವ ಸಂಕಲ್ಪ ಮಾಡಿದ್ದೇನೆ ಎಂದರು.
ರಾಜ್ಯ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಮಾತನಾಡಿ ‘ಇಂದು ಅಧಿಕಾರಕ್ಕಾಗಿ, ಟಿಕೆಟ್‌ಗಾಗಿ ಪೈಪೋಟಿ ನಡೆಯುತ್ತಿದೆ. ಈ ವಿದ್ಯಮಾನದ ಮಧ್ಯೆ ಹೈಕಮಾಂಡ್ ಯುವ ನಾಯಕ ಮಿಥುನ್ ರೈಗೆ ಅವಕಾಶ ನೀಡಿರುವುದು ಒಳ್ಳೆಯ ಬೆಳವಣಿಗೆ. ಹಾಗಾಗಿ ಮಿಥುನ್ ರೈ ಅವರನ್ನು ಗೆಲ್ಲಿಸುವ ಮೂಲಕ ಜನವಿರೋಧಿ ಬಿಜೆಪಿ ಸರಕಾರವನ್ನು ಕಿತ್ತೆಸೆದು ಕಾಂಗ್ರೆಸ್ ಸರಕಾರವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ ಎಂದರು.
ಡಿಸಿಸಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಂಗಳೂರು ಮನಪಾ ಕಾರ್ಪೊರೇಟರ್ ಎಸಿ ವಿನಯರಾಜ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ ಮಾತನಾಡಿದರು.
ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೊ, ಪಕ್ಷದ ಮುಖಂಡರಾದ ದೇವಿಪ್ರಸಾದ್ ಶೆಟ್ಟಿ, ಸುಪ್ರಿಯಾ ಡಿ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
.jpeg)
.jpeg)





.jpeg)
