ಹೂಡೆ: ಸೌಹಾರ್ದ ಇಫ್ತಾರ್ ಕೂಟ

ಉಡುಪಿ, ಎ.17: ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ವತಿಯಿಂದ ಸರ್ವ ಧರ್ಮಿಯರಿಗೆ ಸೌಹಾರ್ದ ಇಫ್ತಾರ್ ಕೂಟವನ್ನು ರವಿವಾರ ಹೂಡೆಯ ಅಬುಲೈಸ್ ಮಸೀದಿಯಲ್ಲಿ ಆಯೋಜಿಸಲಾಗಿತ್ತು.
ಇದ್ರಿಸ್ ಹೂಡೆ ಮಾತನಾಡಿ,ರಂಝಾನ್ ತಿಂಗಳಿನಲ್ಲಿ ಮುಸ್ಲಿಮರು ಕೇವಲ ವಾಡಿಕೆಗೆ ಉಪವಾಸ ಆಚರಿಸಿ ಪ್ರಯೋಜನವಿಲ್ಲ. ಬದಲಾಗಿ ಎಲ್ಲ ಕೆಡುಕಿನಿಂದ ಮುಕ್ತರಾಗಬೇಕು. ಮುಖ್ಯವಾಗಿ ಮಾನವೀತ ಗುಣಗಳನ್ನು ಬೆಳೆಸಿಕೊಳ್ಳಬೇಕು. ತಮ್ಮ ಮಾತಿನಿಂದಾಗಲಿ, ನಡತೆಯಿಂದಾಗಲಿ ಯಾರನ್ನೂ ನೋಯಿಸಬಾರದು. ಆಗ ಮಾತ್ರ ನಮ್ಮ ಉಪವಾಸ ಆಚರಣೆ ಯಶಸ್ವಿಯಾಗುತ್ತದೆ ಎಂದರು.
ನಿವೃತ್ತ ಅಧ್ಯಾಪಕ ಸುಧಕಾರ್ ಶೆಟ್ಟಿ ಮಾತನಾಡಿ, ಇದೊಂದು ಸುಂದರ ಕಾರ್ಯಕ್ರಮ. ಇಂತಹ ಕಾರ್ಯಕ್ರಮದಿಂದ ಪರಸ್ಪರ ಪ್ರೀತಿ, ಸೌಹಾರ್ದತೆ ಹೆಚ್ಚಾಗುತ್ತದೆ. ಇವತ್ತಿನ ಕಾರ್ಯಕ್ರಮದಿಂದ ಮಸೀದಿ ನೋಡುವ ಸೌಭಾಗ್ಯ ದೊರೆಯಿತು. ಅಚ್ಚುಕಟ್ಟಾದ ಮಸೀದಿ ನೋಡಿದಾಗ ಖುಷಿಯಾಗುತ್ತದೆ. ನಾವೆಲ್ಲರೂ ಕೂಡ ಪರಸ್ಪರ ಕೂಡಿ ಬಾಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೂಡೆ ಬಿಲ್ಲವ ಸಂಘದ ಅಧ್ಯಕ್ಷ ಶಂಕರ್ ಅಂಚನ್, ಗ್ರಾಪಂ ಸದಸ್ಯೆ ಯಶೋಧಾ, ನಿವೃತ್ತ ಬ್ಯಾಂಕ್ ಉದ್ಯೋಗಿ ಫೆಲಿಕ್ಸ್ ಪಿಂಟೊ, ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಅಧ್ಯಕ್ಷ ಅಬ್ದುಲ್ ಕಾದೀರ್ ಮೊಯ್ದಿನ್ ಮಾತನಾಡಿದರು. ಮೌಲನ ತಾರೀಕ್ ಕುರಾನ್ ಪಠಣ ನಡೆಸಿದರು. ಯಾಸೀನ್ ಕೋಡಿಬೆಂಗ್ರೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.