ಬಿಜೆಪಿ 3ನೇ ಪಟ್ಟಿ: ಎಸ್. ಎ ರಾಮದಾಸ್ ಗೆ ಕೈ ತಪ್ಪಿದ ಟಿಕೆಟ್
ಪ್ರತಾಪ್ ಸಿಂಹರ ವಿವಾದಾತ್ಮಕ ಹೇಳಿಕೆಗಳಿಗೆ ವಿರೋಧ ವ್ಯಕ್ತಪಡಿಸಿದ್ದ ಹಾಲಿ ಶಾಸಕ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಬಿಜೆಪಿಯು ಅಭ್ಯರ್ಥಿಗಳ 3ನೇ ಪಟ್ಟಿ ಸಂಜೆ ಬಿಡುಗಡೆ ಮಾಡಿದ್ದು, ಮೈಸೂರಿನ ಕೃಷ್ಣರಾಜನಗರ ಕ್ಷೇತ್ರದ ಹಾಲಿ ಶಾಸಕ ಎಸ್. ಎ ರಾಮದಾಸ್ ಗೆ ಟಿಕೆಟ್ ಕೈ ತಪ್ಪಿದೆ.
ಇಲ್ಲಿ ಎಸ್. ಎ ರಾಮದಾಸ್ ಬದಲಿಗೆ, ಶ್ರೀ ವಾತ್ಸವ ಅವರಿಗೆ ಟಿಕೆಟ್ ನೀಡಲಾಗಿದೆ.
ಈ ಹಿಂದೆ ಎಸ್. ಎ ರಾಮದಾಸ್ ಅವರ ಕ್ಷೇತ್ರದಲ್ಲಿನ ಬಸ್ ನಿಲ್ದಾಣದ ನಿರ್ಮಾಣದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಸಂಸದ ಪ್ರತಾಪ್ ಸಿಂಹ 'ಅದು ಗುಂಬಝ್ ರೀತಿ ಇದೆ. ಅದನ್ನು ಒಡೆಯುತ್ತೇನೆ' ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಶಾಸಕ ಎಸ್. ಎ ರಾಮದಾಸ್ 'ಬಸ್ ನಿಲ್ದಾಣವನ್ನು ಯಾವುದೇ ಧರ್ಮದ ಆಧಾರದ ಮೇಲೆ ನಿರ್ಮಾಣ ಮಾಡಿಲ್ಲ' ಎಂದು ತಿರುಗೇಟು ನೀಡಿದ್ದರು.
ಬಳಿಕ ಪ್ರತಾಪ್ ಸಿಂಹ ಹಾಗೂ ರಾಮದಾಸ್ ಪರಸ್ಪರ ಬಹಿರಂಗ ವಾಗ್ದಾಳಿಗಿಳಿದಿದ್ದರು. ಇದೇ ಕಾರಣಕ್ಕೆ ರಾಮದಾಸ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಕಳೆದ ಎರಡು ದಿನಗಳಿಂದ ಚಾಮುಂಡಿಪುರಂನಲ್ಲಿರುವ ರಾಮದಾಸ್ ಕಚೇರಿ ಬಳಿ ಸಾವಿರಾರು ಮಂದಿ ಬೆಂಬಲಿಗರು ಜಮಾವಣೆಗೊಂಡು ತೀವ್ರ ಪ್ರತಿಭಟನೆ ನಡೆಸಿದ್ದರು.
ಪ್ರಧಾನಿ ಈ ಹಿಂದೆ ರಾಜ್ಯಕ್ಕೆ ಬಂದಿದ್ದಾಗ ಎರಡೆರಡು ಬಾರಿ ರಾಮದಾಸ್ ಎದುರು ಕಂಡಾಗ ಬೆನ್ನಿಗೆ ಗುದ್ದಿ ಪ್ರೀತಿ ತೋರಿಸಿದ್ದರು. ಹಾಗಾಗಿ ರಾಮದಾಸ್ ಪ್ರಧಾನಿಗೆ ಆಪ್ತರು ಎಂದು ಹೇಳಲಾಗುತ್ತಿತ್ತು. ಆದರೆ ಈಗ ಅವರಿಗೆ ಟಿಕೆಟ್ ಸಿಕ್ಕಿಲ್ಲ.







