ಶಿವಮೊಗ್ಗ ನಗರ ಕ್ಷೇತ್ರಕ್ಕೆ ಘೋಷಣೆಯಾಗದ ಬಿಜೆಪಿ ಟಿಕೆಟ್: ಹೆಚ್ಚಿದ ಕುತೂಹಲ

ಬೆಂಗಳೂರು, ಎ. 17: ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದ್ದು, ಮಾನ್ವಿ ಹಾಗೂ ಕೆ.ಎಸ್ ಈಶ್ವರಪ್ಪ ಅವರು ಶಾಸಕರಾಗಿದ್ದ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿ ಘೋಷಣೆ ಮಾಡಿಲ್ಲ.
3ನೇ ಪಟ್ಟಿಯಲ್ಲಿ ಎಲ್ಲಾ 12 ಕ್ಷೇತ್ರಗಳಿಗೆ ಅಭ್ಯರ್ಥಿ ಅಂತಿಮ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, 3ನೇ ಪಟ್ಟಿಯಲ್ಲಿ 10 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಮಾತ್ರ ಬಿಜೆಪಿ ಪ್ರಕಟಿಸಿದೆ.
ಮಾಜಿ ಸಚಿವ ಈಶ್ವರಪ್ಪ ಈಗಾಗಲೇ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದರೂ, ಶಿವಮೊಗ್ಗ ನಗರ ಕ್ಷೇತ್ರದಲ್ಲಿ ತಮ್ಮ ಪುತ್ರ ಕಾಂತೇಶ್ ರನ್ನು ಕಣಕ್ಕಳಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಅಲ್ಲಿ ಹೈಕಮಾಂಡ್ ಹೊಸ ಮುಖಕ್ಕೆ ಅವಕಾಶ ನೀಡಲು ಚಿಂತನೆ ನಡೆಸಿದೆ ಎಂದೂ ಹೇಳಲಾಗುತ್ತಿದೆ.
ಮತ್ತೊಂದು ಕಡೆ ಈಶ್ವರಪ್ಪ ವಿರುದ್ಧ ಅಸಮಾಧಾನ ಹೊರಹಾಕಿದ್ದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಈಶ್ವರಪ್ಪ ಪುತ್ರನಿಗೆ ಟಿಕೆಟ್ ಘೋಷಿಸಿದರೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಎಚ್ಚರಿಕೆ ನೀಡಿದ್ದಾರೆ.





