ಅಣ್ಣಾಮಲೈಯಿಂದ ಹಣ ಸಾಗಾಟದ ಆರೋಪ: ಹೆಲಿಕಾಪ್ಟರ್, ವಾಹನ, ಹೊಟೇಲ್ ಕೊಠಡಿ, ಬ್ಯಾಗ್ ತಪಾಸಣೆ

ಉಡುಪಿ, ಎ.17: ಹಣ ಸಾಗಾಟದ ದೂರಿನ ಹಿನ್ನೆಲೆಯಲ್ಲಿ ಬಿಜೆಪಿ ತಮಿಳುನಾಡು ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಎ.17ರಂದು ಉಡುಪಿ ಜಿಲ್ಲೆಗೆ ಆಗಮಿಸಿದ ಹೆಲಿಕಾಪ್ಟರ್‌ನ್ನು ಚುನಾವಣಾಧಿಕಾರಿಗಳು ಇಂದು ಆದಿಉಡುಪಿ ಹೆಲಿಪ್ಯಾಡ್ ನಲ್ಲಿ ತಪಾಸಣೆಗೆ ಒಳಪಡಿಸಲಾಯಿತು.
ಉಡುಪಿ ವಿಧಾನಸಭಾ ಕ್ಷೇತ್ರದ ಎಂಸಿಸಿ ನೋಡೆಲ್ ಅಧಿಕಾರಿ ಹಾಗೂ ಎಫ್‌ಎಸ್‌ಟಿ ತಂಡಗಳು ಹೆಲಿಪ್ಯಾಡ್‌ನಲ್ಲಿ ಲ್ಯಾಂಡ್ ಆದ ಹೆಲಿಕಾಪ್ಟರ್‌ನ್ನು ಸಂಪೂರ್ಣವಾಗಿ ತಪಾಸಣೆ ನಡೆಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಚುನಾ ವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿರುವ ಯಾವುದೇ ಅಂಶಗಳು ಕಂಡು ಬಂದಿಲ್ಲ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ನಂತರ ಅಣ್ಣಾಮಲೈ ಕಡಿಯಾಳಿಯಲ್ಲಿರುವ ಹೊಟೇಲಿಗೆ ಆಗಮಿಸಿದ ವಾಹನ ಮತ್ತು ಅದರಲ್ಲಿ ಬ್ಯಾಗ್‌ನ್ನು ಪರಿಶೀಲನೆ ಮಾಡಲಾಗಿದೆ. ಮುಂದೆ ಅದೇ ವಾಹನ ಕಾಪು ತೆರಳಿದಾಗ ಉದ್ಯಾವರ ಚೆಕ್‌ಪೋಸ್ಟ್‌ನಲ್ಲಿ ಮತ್ತೊಮ್ಮೆ ಪರಿಶೀಲನೆ ನಡೆಸಲಾಯಿತು. ಮಧ್ಯಾಹ್ನ ಕಡಿಯಾಳಿಯಲ್ಲಿರುವ ಹೊಟೇಲಿಗೆ ಆಗಮಿಸಿದಾಗ ಇಡೀ ಕೊಠಡಿ ಹಾಗೂ ಬ್ಯಾಗ್‌ನ್ನು ಕೂಡ ತಪಾಸಣೆ ಮಾಡ ಲಾಯಿತು. ಆದರೆ ಎಲ್ಲೂ ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದು ಕಂಡುಬಂದಿಲ್ಲ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಅಣ್ಣಾಮಲೈ ಆಗಮಿಸಿರುವುದರಿಂದ ನಿರ್ಗಮನದವರೆಗೂ ಚುನಾವಣಾ ಮಾದರಿ ನೀತಿ ಸಂಹಿತೆಯ ನಿಯಮಾನುಸಾರ ಹಂತಹಂತವಾಗಿ ಪರಿಶೀಲನೆ ನಡೆಸಿದ್ದು, ಯಾವುದೇ ಲೋಪಗಳು ಕಂಡು ಬಂದಿಲ್ಲ ಎಂದು ಚುನಾವಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.