ಉಡುಪಿ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ; ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ, ದಂಡ

ಉಡುಪಿ, ಎ.17: ಎರಡು ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪೋಕ್ಸೋ ಪ್ರಕರಣದ ಆರೋಪಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ನ್ಯಾಯಾಲಯದಲ್ಲಿನ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯವು 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಸೋಮವಾರ ಆದೇಶ ನೀಡಿದೆ.
ಸಾಹಿಲ್ (23) ಶಿಕ್ಷೆಗೆ ಗುರಿಯಾದ ಆರೋಪಿ.
ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿರುವ ನೊಂದ ಬಾಲಕಿ ಸಾಗರದಲ್ಲಿ ವಾಸ ಮಾಡಿಕೊಂಡಿದ್ದು, ಆರೋಪಿಯು ಅಲ್ಲಿಯೇ ಇದ್ದ ನೊಂದ ಬಾಲಕಿಯ ತಂದೆಯ ಹೊಟೇಲ್ ಬಳಿ ಕೆಲಸ ಮಾಡುತ್ತಿದ್ದನು. ಈ ವೇಳೆ ಆರೋಪಿ ನೊಂದ ಬಾಲಕಿಯನ್ನು ಸಂಪರ್ಕಿಸಿ ಪ್ರೀತಿಸುವುದಾಗಿ ಹೇಳಿದ್ದನು.
2021ರಲ್ಲಿ ಜುಲೈ ತಿಂಗಳಲ್ಲಿ ನೊಂದ ಬಾಲಕಿಯು ತನ್ನ ಊರಿಗೆ ಬಂದಿದ್ದು, ಆ ಸಮಯ ಆಕೆಯ ಜನ್ಮದಿನದಂದು ಸಾಗರದಿಂದ ಬೈಂದೂರಿಗೆ ಬಂದು ಆತ, ಆಕೆಯನ್ನು ರಾತ್ರಿ ಹಾಡಿಗೆ ಕರೆದುಕೊಂಡು ಹೋಗಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಮಾಡಿದ್ದನು. ಇದೇ ರೀತಿ ಆರೋಪಿ ನೊಂದ ಬಾಲಕಿ ಯನ್ನು ಹಾಡಿಗೆ ಕರೆದುಕೊಂಡು ಹೋಗಿ ಹಲವು ಬಾರಿ ದೈಹಿಕ ಸಂಪರ್ಕ ನಡೆಸಿದ್ದನು.
ಈ ವಿಚಾರ ತಿಳಿದ ನೊಂದ ಬಾಲಕಿಯ ತಾಯಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆಗಿನ ಪೊಲೀಸ್ ನಿರೀಕ್ಷಕ ಸಂತೋಷ್ ಎ.ಕಾಯ್ಕಿಣಿ ಆರೋಪಿಯ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ಒಟ್ಟು 25 ಸಾಕ್ಷಿಗಳ ಪೈಕಿ 13 ಸಾಕ್ಷಿಗಳನ್ನು ವಿಚಾರಣೆ ನಡೆಸ ಲಾಗಿದೆ. ಸಾಂಧರ್ಭಿಕ ಸಾಕ್ಷ್ಯವನ್ನು ಪರಿಗಣಿಸಿದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಆರೋಪಿಯನ್ನು ದೋಷಿ ಎಂದು ತೀರ್ಮಾನಿಸಿ 20ವರ್ಷಗಳ ಕಠಿಣ ಶಿಕ್ಷೆ ಮತ್ತು 22,500ರೂ. ದಂಡವನ್ನು ವಿಧಿಸಿ ಆದೇಶ ನೀಡಿದೆ. ನೊಂದ ಬಾಲಕಿಗೆ 1.50ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಸರಕಾರಕ್ಕೆ ಆದೇಶಿಸಿದೆ. ಪ್ರಾಸಿಕ್ಯೂಷನ್ ಪರವಾಗಿ ಉಡುಪಿ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದಿಸಿದ್ದರು.







