ವಿಧಾನಸಭೆ ಚುನಾವಣೆ: ಡಿಕೆಶಿ, ಎಚ್ ಡಿಕೆ, ಸೋಮಣ್ಣ ಸೇರಿ ಒಂದೇ ದಿನ 842 ನಾಮಪತ್ರ ಸಲ್ಲಿಕೆ

ಬೆಂಗಳೂರು, ಎ. 17: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರು ಸೋಮವಾರ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಅಶ್ವತ್ಥನಾರಾಯಣ, ವಿ.ಸೋಮಣ್ಣ, ಆರ್.ಅಶೋಕ್, ಮಾಜಿ ಸಚಿವರಾದ ಸಿ.ಟಿ.ರವಿ, ಶಾಮನೂರು ಶಿವಶಂಕರಪ್ಪ, ಎಚ್.ಡಿ.ರೇವಣ್ಣ, ಬಿ.ವೈ.ವಿಜಯೇಂದ್ರ ಸೇರಿದಂತೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸುವ ಮೂಲಕ ಚುನಾವಣಾ ಅಖಾಡಕ್ಕೆ ಧುಮುಕ್ಕಿದ್ದಾರೆ.
ಬಿಜೆಪಿಯ 198, ಕಾಂಗ್ರೆಸ್-195, ಜೆಡಿಎಸ್-86, ಎಎಪಿ-50, ಬಿಎಸ್‍ಪಿ-17, ಪಕ್ಷೇತರರು-161 ಸೇರಿದಂತೆ 782 ಪುರುಷ, 60 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 842 ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
ಬಹುತೇಕ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೂ ಮುನ್ನ ತಮ್ಮ ಇಷ್ಟದ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ತಮ್ಮ ಅಪಾರ ಸಂಖ್ಯೆಯ ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ಅದ್ದೂರು ಮೆರವಣಿಗೆಯಲ್ಲಿ ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ಚುನಾಣಾಧಿಕಾರಿಗೆ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ-ಚನ್ನಪಟ್ಟಣ, ಡಿ.ಕೆ.ಶಿವಕುಮಾರ್-ಕನಕಪುರ, ಡಾ.ಅಶ್ವತ್ಥ ನಾರಾಯಣ- ಮಲ್ಲೇಶ್ವರ, ಆರ್.ಅಶೋಕ್-ಪದ್ಮನಾಭನಗರ, ವಿ.ಸೋಮಣ್ಣ-ವರುಣಾ, ಎಸ್.ಎಸ್.ಮಲ್ಲಿಕಾರ್ಜುನ-ದಾವಣಗೆರೆ ಉತ್ತರ, ಪ್ರಿಯಾಂಕ್ ಖರ್ಗೆ-ಚಿತ್ತಾಪುರ, ಎಚ್.ಕೆ.ಪಾಟೀಲ್-ಗದಗ, ಎಸ್.ಟಿ.ಸೋಮ ಶೇಖರ್-ಯಶವಂತಪುರ, ಶಾಮನೂರು ಶಿವಶಂಕರಪ್ಪ-ದಾವಣಗೆರೆ ದಕ್ಷಿಣ, ಎಂಟಿಬಿ ನಾಗರಾಜ್-ಹೊಸಕೋಟೆ, ಎಂ.ಬಿ.ಪಾಟೀಲ್-ಬಬಳೇಶ್ವರ, ಬಿ.ವೈ.ವಿಜಯೇಂದ್ರ-ಶಿಕಾರಿಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.
ಎ.13ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಮೊದಲ ದಿನ 221, ಎ.15ರಂದು 200 ಹಾಗೂ ಎ.17ರಂದು 842 ನಾಮಪತ್ರಗಳು ಸೇರಿದಂತೆ ಒಟ್ಟು 1,263 ನಾಮಪತ್ರಗಳನ್ನು ಸಲ್ಲಿಕೆ ಮಾಡಲಾಗಿದೆ. ಎ.20ರ ವರೆಗೆ ಇನ್ನೂ ಮೂರು ದಿನಗಳ ಕಾಲ ನಾಮಪತ್ರ ಸಲ್ಲಿಕೆ ಅವಕಾಶವಿದ್ದು, ಎ.21ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದೆ. ಎ.24ಕ್ಕೆ ಉಮೇದುವಾರಿಕೆ ವಾಪಸ್ ಪಡೆಯಲು ಕೊನೆಯ ದಿನವಾಗಿದೆ.







