ಅತೀಕ್ , ಅಶ್ರಫ್ ಹತ್ಯೆಯಲ್ಲಿ ಸಿಬಿಐ ತನಿಖೆ ಕೋರಿ ಸುಪ್ರೀಂ ಮೆಟ್ಟಿಲೇರಿದ ಮಾಜಿ ಐಪಿಎಸ್ ಅಧಿಕಾರಿ

ಹೊಸದಿಲ್ಲಿ,ಎ.17: ಗ್ಯಾಂಗ್ ಸ್ಟಾರ್-ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಆತನ ಸೋದರ ಅಶ್ರಫ್ ಅಹ್ಮದ್ ಅವರ ಹತ್ಯೆಗಳಲ್ಲಿ ಸಿಬಿಐ ತನಿಖೆಯನ್ನು ಕೋರಿ ನಿವೃತ್ತ ಐಪಿಎಸ್ ಅಧಿಕಾರಿ ಅಮಿತಾಭ್ ಠಾಕೂರ್ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ಸಲ್ಲಿಸಿದ್ದಾರೆ.
ಇದಕ್ಕೂ ಮುನ್ನ ವಕೀಲ ವಿಶಾಲ ತಿವಾರಿಯವರು ಉತ್ತರ ಪ್ರದೇಶದಲ್ಲಿ ಪೊಲೀಸ್ ದೌರ್ಜನ್ಯಗಳನ್ನು ಆರೋಪಿಸಿ ಪಿಐಎಲ್ ಸಲ್ಲಿಸಿ, ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶರ ನೇತೃತ್ವದಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸುವಂತೆ ಕೋರಿದ್ದರು. ಅತೀಕ್ ಮತ್ತು ಅಷ್ರಫ್ರನ್ನು ಹತ್ಯೆಗೈದ ಮೂವರು ಶೂಟರ್ ಗಳ ವಿರುದ್ಧ ದಾಖಲಿಸಲಾಗಿರುವ ಎಫ್ಐಆರ್ ನ್ನು ಸಿಬಿಐಗೆ ವರ್ಗಾಯಿಸುವಂತೆ ಉತ್ತರ ಪ್ರದೇಶ ಸರಕಾರಕ್ಕೆ ನಿರ್ದೇಶನಗಳನ್ನು ನೀಡುವಂತೆ ಠಾಕೂರ್ ತನ್ನ ಅರ್ಜಿಯಲ್ಲಿ ಕೋರಿದ್ದಾರೆ.
ಎ.15ರಂದು ತಡರಾತ್ರಿ ಪ್ರಯಾಗರಾಜ್ ನಲ್ಲಿ ಪೊಲೀಸರು ಅತೀಕ್ ಮತ್ತು ಅಶ್ರಫ್ ರನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯುತ್ತಿದ್ದಾಗ ಮಾಧ್ಯಮ ಪ್ರತಿನಿಧಿಗಳು ಮತ್ತು ಕ್ಯಾಮೆರಾಗಳ ಎದುರಿನಲ್ಲೇ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಆರೋಪಿಗಳಾದ ಸನ್ನಿ, ಲವ್ಲೇಶ ತಿವಾರಿ ಮತ್ತು ಅರುಣ್ ಮೌರ್ಯ 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ.





