ರಶ್ಯ: ಪುಟಿನ್ ವಿರೋಧಿಗೆ 25 ವರ್ಷ ಜೈಲುಶಿಕ್ಷೆ

ಮಾಸ್ಕೋ, ಎ.17: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರನ್ನು ಕಟುವಾಗಿ ಟೀಕಿಸುತ್ತಿದ್ದ ವಿರೋಧ ಪಕ್ಷದ ಮುಖಂಡ ವ್ಲಾದಿಮಿರ್ ಕರಾ-ಮುರ್ಝಾಗೆ ಮಾಸ್ಕೋದ ನ್ಯಾಯಾಲಯವು ದೇಶದ್ರೋಹ ಹಾಗೂ ಇತರ ಅಪರಾಧಗಳಿಗೆ ತಪ್ಪಿತಸ್ಥನೆಂದು ತೀರ್ಪು ನೀಡಿ 25 ವರ್ಷದ ಕಠಿಣ ಜೈಲುಶಿಕ್ಷೆ ವಿಧಿಸಿದೆ.
ರಶ್ಯ ಮತ್ತು ಬ್ರಿಟನ್ ಪಾಸ್ಪೋರ್ಟ್ ಹೊಂದಿರುವ ಕರಾ-ಮುರ್ಝಾ ರಶ್ಯ ಅಧ್ಯಕ್ಷರ ನಿರ್ಧಾರಗಳನ್ನು ದೀರ್ಘಕಾಲದಿಂದ ವಿರೋಧಿಸುತ್ತಾ ಬಂದವರು. ಉಕ್ರೇನ್ ಮೇಲಿನ ಆಕ್ರಮಣದ ಬಳಿಕ ರಶ್ಯದ ಮೇಲೆ ಪಾಶ್ಚಿಮಾತ್ಯ ದೇಶಗಳು ನಿರ್ಬಂಧ ವಿಧಿಸಬೇಕೆಂದು ಬಹಿರಂಗವಾಗಿ ಆಗ್ರಹಿಸಿದ್ದರು. `ರಶ್ಯವು ಕೊಲೆಗಡುಕರ ಆಡಳಿತಡಿ ಇದೆ' ಎಂದು ಹೇಳಿದ್ದರಲ್ಲದೆ, ಅಮೆರಿಕ ಮತ್ತು ಯುರೋಪ್ಗೆ ಭೇಟಿ ನೀಡಿದ ಸಂದರ್ಭ ಮಾಧ್ಯಮದವರ ಜತೆ ಮಾತನಾಡಿ `ಉಕ್ರೇನ್ನಲ್ಲಿ ರಶ್ಯವು ಅಮಾಯಕ ನಾಗರಿಕರನ್ನು ಗುರಿಯಾಗಿಸಿ ವೈಮಾನಿಕ ದಾಳಿ ನಡೆಸುತ್ತಿದೆ' ಎಂದು ಆರೋಪಿಸಿದ್ದರು.
ಕರಾ-ಮುರ್ಝಾರ ವಿರುದ್ಧದ ದೇಶದ್ರೋಹ ಮತ್ತು ರಶ್ಯದ ಮಿಲಿಟರಿಗೆ ಕೆಟ್ಟ ಹೆಸರು ತಂದ ಆರೋಪ ಸಾಬೀತಾಗಿದೆ ಎಂದು ನ್ಯಾಯಾಲಯದ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.