ಅರೆಸೇನಾ ಪಡೆ ನೆಲೆಯ ಮೇಲೆ ಸೇನೆಯ ವೈಮಾನಿಕ ದಾಳಿ: ಸುಡಾನ್ ನಲ್ಲಿ ಮುಂದುವರಿದ ಸಂಘರ್ಷ
ಮೃತರ ಸಂಖ್ಯೆ 61ಕ್ಕೆ ಏರಿಕೆ; 700 ಮಂದಿಗೆ ಗಾಯ

ಖಾರ್ಟಮ್, ಎ.17: ಸುಡಾನ್ ನಲ್ಲಿ ಸೇನಾಪಡೆ ಮತ್ತು ಅರೆಸೇನಾ ಪಡೆಯ ನಡುವೆ ಶನಿವಾರದಿಂದ ಆರಂಭಗೊಂಡಿರುವ ಸಂಘರ್ಷ ಸೋಮವಾರವೂ ಮುಂದುವರಿದಿದ್ದು ದೇಶದ ಮೇಲೆ ನಿಯಂತ್ರಣ ಸಾಧಿಸಲು ಎರಡು ಬಲಿಷ್ಟ ಪಡೆಗಳು ನಡೆಸುತ್ತಿರುವ ಜಿದ್ದಾಜಿದ್ದಿನ ಹೋರಾಟದಲ್ಲಿ ಜನಸಾಮಾನ್ಯರು ಹೈರಾಣಾಗಿದ್ದಾರೆ ಎಂದು ಮಾಧ್ಯಮದ ವರದಿ ಹೇಳಿದೆ.
ಮೂರನೇ ದಿನಕ್ಕೆ ಮುಂದುವರಿದಿರುವ ಸಂಘರ್ಷದಲ್ಲಿ ಇದುವರೆಗೆ ಅಧಿಕೃತ ಅಂಕಿಅಂಶದ ಪ್ರಕಾರ 61 ಮಂದಿ ಮೃತಪಟ್ಟಿದ್ದು ಸುಮಾರು 700 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ವಿಶ್ವಸಂಸ್ಥೆಯ ಮಾನವೀಯ ನೆರವು ವಿತರಿಸುವ ಏಜೆನ್ಸಿಯ ಮೂವರು ಸದಸ್ಯರೂ ಸೇರಿದ್ದಾರೆ. ಈ ಮಧ್ಯೆ, ದೇಶದಲ್ಲಿ ತಕ್ಷಣ ಕದನ ವಿರಾಮ ಜಾರಿಗೆ ಅಂತರಾಷ್ಟ್ರೀಯ ಒತ್ತಡ ಹೆಚ್ಚುತ್ತಿದೆ. ಸುಡಾನ್ನ ಮಿಲಿಟರಿ ಆಡಳಿತದ ವಿರುದ್ಧ ಅಲ್ಲಿನ ಅರೆಸೇನಾ ಪಡೆ ದಂಗೆ ಎದ್ದಿದ್ದು ಶನಿವಾರ ಬೆಳಗ್ಗೆ ಆರಂಭಗೊಂಡ ಘರ್ಷಣೆ ಕ್ರಮೇಣ ತೀವ್ರಗೊಂಡು ದೇಶದಾದ್ಯಂತ ವ್ಯಾಪಿಸಿದೆ.
ಸಶಸ್ತ್ರ ಪಡೆ ಹಾಗೂ ಕ್ಷಿಪ್ರ ಕಾರ್ಯಪಡೆ(ಅರೆಸೇನಾ ಪಡೆಯ ವಿಶೇಷ ಕಾರ್ಯಪಡೆ)ಯ ನಡುವೆ ಹಲ ತಿಂಗಳಿಂದ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಶನಿವಾರ ಘರ್ಷಣೆಯ ರೂಪಕ್ಕೆ ತಿರುಗಿದೆ. ಕ್ಷಿಪ್ರ ಕಾರ್ಯಪಡೆ(ಅರೆಸೇನಾ ಪಡೆಯ ವಿಶೇಷ ಕಾರ್ಯಪಡೆ)ಯನ್ನು ಸಶಸ್ತ್ರ ಪಡೆಯಲ್ಲಿ ವಿಲೀನಗೊಳಿಸುವ ಸೇನಾಡಳಿತದ ನಿರ್ಧಾರಕ್ಕೆ ಅರೆಸೇನಾ ಪಡೆ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಗೆ ಇಳಿದಿದೆ.
ಈ ಬಿಕ್ಕಟ್ಟಿನಿಂದಾಗಿ 2021ರಲ್ಲಿ ಸೇನೆಯು ಅರೆಸೇನಾ ಪಡೆಯ ನೆರವಿಂದ ಕ್ಷಿಪ್ರಕ್ರಾಂತಿಯ ಮೂಲಕ ಅಧಿಕಾರ ಕೈವಶಪಡಿಸಿಕೊಂಡ ಬಳಿಕ ಕ್ರಮೇಣ ಎರಡೂ ಪಡೆಯ ನಡುವೆ ಭಿನ್ನಾಭಿಪ್ರಾಯ ಬೆಳೆಯುತ್ತಿದೆ.
ಎರಡೂ ಪಡೆಗಳು ಶಸ್ತ್ರಸಜ್ಜಿತ ವಾಹನಗಳು, ಟ್ರಕ್ ನಲ್ಲಿ ಸ್ಥಾಪಿಸಲಾದ ಮೆಷಿನ್ಗನ್ಗಳು ಹಾಗೂ ಯುದ್ಧವಿಮಾನಗಳನ್ನು ಬಳಸಿ ಪರಸ್ಪರರ ಮೇಲೆ ದಾಳಿ ನಡೆಸುತ್ತಿವೆ. ರಾಜಧಾನಿ ಖಾರ್ಟಮ್ ನಲ್ಲಿ ಆರಂಭಗೊಂಡ ಘರ್ಷಣೆ ಕ್ರಮೇಣ ಆಮ್ಡರ್ಮನ್ ನಗರ ಹಾಗೂ ದೇಶದಾದ್ಯಂತ ವ್ಯಾಪಿಸಿದೆ. ಖಾರ್ಟಮ್ ನಲ್ಲಿಯೇ ಎರಡೂ ಪಡೆಗಳ ಸಾವಿರಾರು ಯೋಧರು ಪರಸ್ಪರ ದಾಳಿಯಲ್ಲಿ ತೊಡಗಿದ್ದಾರೆ. ರವಿವಾರ ಕನಿಷ್ಟ 5 ನಾಗರಿಕರು ಮೃತಪಟ್ಟು ಇತರ 78 ಮಂದಿ ಗಾಯಗೊಂಡಿದ್ದು ಮೃತರ ಸಂಖ್ಯೆ 61ಕ್ಕೇರಿದೆ. ಗಾಯಾಳುಗಳ ಸಂಖ್ಯೆ 670ನ್ನು ದಾಟಿದೆ ಎಂದು ಸುಡಾನ್ ವೈದ್ಯರ ಸಂಘಟನೆ ಹೇಳಿದೆ.
ಸಶಸ್ತ್ರ ಪಡೆಯ ಕಮಾಂಡರ್ ಜನರಲ್ ಅಬ್ದುಲ್ ಫತಾಹ್ ಬರ್ಹಾನ್ ಮತ್ತು ರ್ಯಾಪಿಡ್ ಫೋರ್ಸ್ನ ಮುಖಂಡ ಜನರಲ್ ಮುಹಮ್ಮದ್ ಹಮ್ದಾನ್ ಡಗಾಲೊ ನಡುವೆ ಕೆಲ ದಿನಗಳಿಂದ ಅಧಿಕಾರಕ್ಕೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಈಗ ತೀವ್ರ ಸಂಘರ್ಷದ ಹಂತಕ್ಕೆ ತಿರುಗಿದೆ. ಇವರಿಬ್ಬರೂ 2021ರ ಅಕ್ಟೋಬರ್ನಲ್ಲಿ ಸುಡಾನ್ನ ಪ್ರಜಾಸತ್ತಾತ್ಮಕ ಸರಕಾರದ ವಿರುದ್ಧ ನಡೆದ ಮಿಲಿಟರಿ ದಂಗೆಯಲ್ಲಿ ಕೈಜೋಡಿಸಿದ್ದರು. ಆದರೆ ಕ್ರಮೇಣ ಅಧಿಕಾರಕ್ಕಾಗಿ ಭಿನ್ನಾಭಿಪ್ರಾಯ ಆರಂಭಗೊಂಡಿತ್ತು.
ಖಾರ್ಟಮ್ ಮತ್ತು ಆಮ್ಡರ್ಮನ್ ನಲ್ಲಿ ಸೇನೆಯ ಕೇಂದ್ರಕಚೇರಿ, ಖಾರ್ಟಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಸರಕಾರಿ ಸ್ವಾಮ್ಯದ ಟಿವಿ ವಾಹಿನಿಯ ಕೇಂದ್ರಕಚೇರಿಯ ಸುತ್ತಮುತ್ತ ಸಂಘರ್ಷ ನಡೆಯುತ್ತಿದೆ. ಖಾರ್ಟಮ್ ಹಾಗೂ ಇತರೆಡೆ ಪ್ರಮುಖ ಕಾರ್ಯತಂತ್ರದ ಸ್ಥಳಗಳ ಮೇಲೆ ನಿಯಂತ್ರಣ ಸಾಧಿಸಿರುವುದಾಗಿ ಉಭಯ ಪಡೆಗಳೂ ಪ್ರತಿಪಾದಿಸಿವೆ ಹಾಗೂ ರಾಜಿ ಮಾತುಕತೆ ಸಾಧ್ಯವೇ ಇಲ್ಲ ಎಂದು ಪಟ್ಟುಹಿಡಿದಿವೆ.
ಈ ಮಧ್ಯೆ, ರಾಜತಾಂತ್ರಿಕ ಒತ್ತಡವೂ ಹೆಚ್ಚುತ್ತಿದ್ದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ, ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್, ಯುರೋಪಿಯನ್ ಯೂನಿಯನ್, ಆಫ್ರಿಕನ್ ಯೂನಿಯನ್ ಕಮಿಷನ್, ಅರಬ್ ಲೀಗ್, ಖತರ್, ಈಜಿಪ್ಟ್, ಸೌದಿ ಅರೆಬಿಯಾ ಮತ್ತು ಯುಎಇ ತಕ್ಷಣ ಕದನವಿರಾಮ ಜಾರಿಗೊಳಿಸಿ ಶಾಂತಿ ಮಾತುಕತೆಗೆ ಮುಂದಾಗುವಂತೆ ಕರೆ ನೀಡಿದ್ದಾರೆ.
ಸೇನೆಯ ಮೇಲುಗೈ..?
ಈ ಮಧ್ಯೆ, 3 ದಿನಗಳಿಂದ ಮುಂದುವರಿದಿರುವ ಅಧಿಕಾರಕ್ಕಾಗಿ ಹೋರಾಟದಲ್ಲಿ ಸೇನಾಪಡೆ ಮೇಲುಗೈ ಸಾಧಿಸಿರುವ ಲಕ್ಷಣ ಗೋಚರಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ರವಿವಾರ ಸೇನೆಯ ಯುದ್ಧವಿಮಾನಗಳು ಅರೆಸೇನಾ ಪಡೆಯ ಪ್ರಮುಖ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದ್ದು ಅರೆಸೇನಾ ಪಡೆಗೆ ಭಾರೀ ಹಿನ್ನಡೆಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ. ಬಾಹ್ರಿ ಪ್ರದೇಶದ ಕಫೋರಿ ಜಿಲ್ಲೆಯಲ್ಲಿರುವ ಅರೆಸೇನಾ ಪಡೆಯ ಪ್ರಮುಖ ನೆಲೆ, ನೈಲ್ ನದಿ ಪ್ರದೇಶದ ಸುತ್ತಮುತ್ತ ಹಾಗೂ ರಾಜಧಾನಿ ಖಾರ್ಟಮ್ನಲ್ಲಿನ ನೆಲೆಗಳೂ ಸೇನೆಯ ವೈಮಾನಿಕ ದಾಳಿಗೆ ಗುರಿಯಾಗಿದೆ ಎಂದು ವರದಿ ಹೇಳಿದೆ.