ಸಹಸ್ರ ಕೋಟಿ ಒಡೆಯ ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ.ನಾಗರಾಜು

ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಎಂ.ಟಿ.ಬಿ.ನಾಗರಾಜು ಸಹಸ್ರ ಕೋಟಿ ಸಂಪತ್ತಿನ ಒಡೆಯರಾಗಿದ್ದು, 372.42 ಕೋಟಿ ರೂ.ಚರಾಸ್ಥಿ ಹಾಗೂ 798.38 ಕೋಟಿ ರೂ.ಗಳ ಸ್ಥಿರಾಸ್ತಿಯನ್ನು ಹೊಂದಿರುವುದಾಗಿ ಚುನಾವಣಾಧಿಕಾರಿಗೆ ಸಲ್ಲಿಸಿರುವ ಆಸ್ತಿಯ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.
ಅವರ ಪತ್ನಿ ಶಾಂತಕುಮಾರಿ ಹೆಸರಿನಲ್ಲಿ 163.78 ಕೋಟಿ ರೂ.ಗಳ ಚರಾಸ್ಥಿ ಹಾಗೂ 274.97 ಕೋಟಿ ರೂ.ಗಳ ಸ್ಥಿರಾಸ್ತಿ ಇದೆ. ನಾಗರಾಜು ಅವರ ಕೈಯಲ್ಲಿ 64.89 ಲಕ್ಷ ರೂ.ನಗದು ಇದ್ದರೆ ಅವರ ಪತ್ನಿ ಕೈಯಲ್ಲಿ 34.29 ಲಕ್ಷ ರೂ.ನಗದು ಇದೆ. ವಿವಿಧ ಬ್ಯಾಂಕುಗಳಲ್ಲಿ ನಾಗರಾಜು ಉಳಿತಾಯ ಖಾತೆಯಲ್ಲಿ 29.12 ಕೋಟಿ ರೂ. ಹಾಗೂ ನಿಶ್ಚಿತ ಠೇವಣಿ ರೂಪದಲ್ಲಿ 33.08 ಕೋಟಿ ರೂ.ಗಳನ್ನು ಹೊಂದಿದ್ದಾರೆ. ಅವರ ಪತ್ನಿಯ ಉಳಿತಾಯ ಖಾತೆಯಲ್ಲಿ 6.16 ಕೋಟಿ ರೂ. ಹಾಗೂ ನಿಶ್ಚಿತ ಠೇವಣಿ ರೂಪದಲ್ಲಿ 1.99 ಕೋಟಿ ರೂ.ಇದೆ.
ವಿವಿಧ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳಿಂದ ನಾಗರಾಜು 71.01 ಕೋಟಿ ರೂ.ಸಾಲ ಪಡೆದಿದ್ದರೆ, ಅವರ ಪತ್ನಿ 27.35 ಕೋಟಿ ರೂ.ಸಾಲವನ್ನು ಹೊಂದಿದ್ದಾರೆ. 2021-22ನೆ ಆರ್ಥಿಕ ವರ್ಷದಲ್ಲಿ ನಾಗರಾಜು ಅವರ ಆದಾಯ 96.84 ಕೋಟಿ ರೂ. ಹಾಗೂ ಅವರ ಪತ್ನಿಯ ಆದಾಯ 41.09 ಕೋಟಿ ರೂ.ಗಳಾಗಿದೆ.
ವಾಹನಗಳು: 1.65 ಕೋಟಿ ರೂ.ಮೌಲ್ಯದ ಲ್ಯಾಂಡ್ ರೋವರ್ ಡೆಫೆಂಡರ್, 3.41 ಲಕ್ಷ ರೂ.ಮೌಲ್ಯದ ಹುಂಡ್ಯೆ ಐ10, 4 ಲಕ್ಷ ರೂ.ಮೌಲ್ಯದ ಬೊಲೆರೊ ವಾಹವನ್ನು ನಾಗರಾಜು ಹೊಂದಿದ್ದಾರೆ. ಅವರ ಪತ್ನಿ ಹೆಸರಿನಲ್ಲಿ 1.04 ಕೋಟಿ ರೂ.ಮೌಲ್ಯದ ಪೋರ್ಚ್ ಹಾಗೂ 29.23 ಲಕ್ಷ ರೂ.ಮೌಲ್ಯದ ಇನ್ನೋವಾ ಕ್ರಿಸ್ಟಾ ವಾಹನ ಇದೆ.
30 ಕೋಟಿ ರೂ.ಮೌಲ್ಯದ 49 ಎಕರೆ ಜಮೀನು ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಹೊಂದಿದ್ದಾರೆ. ಹೂಡಿಯಲ್ಲಿ 27.60 ಕೋಟಿ ರೂ.ಮೌಲ್ಯದ ನಾಲ್ಕು ಎಕರೆ ಕೃಷಿ ಭೂಮಿಯನ್ನು ನಾಗರಾಜು ಹೊಂದಿದ್ದಾರೆ.







