ಆಧಾರ್-ಆಸ್ತಿ ದಾಖಲೆ ಜೋಡಿಸುವಂತೆ ಕೋರಿ ಅರ್ಜಿ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

ಹೊಸದಿಲ್ಲಿ, ಎ. 17: ಭ್ರಷ್ಟಾಚಾರ, ಕಪ್ಪು ಹಣ ಸೃಷ್ಟಿ ಹಾಗೂ ಬೇನಾಮಿ ವರ್ಗಾವಣೆ ತಡೆಯಲು ಆಧಾರ್‌ನೊಂದಿಗೆ ನಾಗರಿಕರ ಸ್ಥಿರ ಹಾಗೂ ಚರ ಆಸ್ತಿಗಳ ದಾಖಲೆಗಳನ್ನು ಜೋಡಿಸುವಂತೆ ಕೋರಿ ಸಲ್ಲಿಸಲಾದ ಮನವಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯ ಸೋಮವಾರ ಕೇಂದ್ರ ಸರಕಾರಕ್ಕೆ ಸೂಚಿಸಿದೆ.
ಅರ್ಜಿಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸಲು ಹಣಕಾಸು, ಕಾನೂನು, ಗೃಹ ಹಾಗೂ ನಗರ ವ್ಯವಹಾರ, ಗ್ರಾಮೀಣ ಅಭಿವೃದ್ಧಿ ಸಚಿವಾಲಯಗಳಿಗೆ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಹಾಗೂ ನ್ಯಾಯಮೂರ್ತಿ ಯಶ್ವಂತ್ ವರ್ಮಾ ಅವರನ್ನೊಳಗೊಂಡ ಪೀಠ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.
ಇದು ಉತ್ತಮ ವಿಷಯ. ಪ್ರತಿಕ್ರಿಯೆ ಬರಲಿ ಎಂದು ಪೀಠ ಮೌಖಿಕವಾಗಿ ಅಭಿಪ್ರಾಯಿಸಿತು. ಅಲ್ಲದೆ, ಮುಂದಿನ ವಿಚಾರಣೆಯನ್ನು ಜುಲೈ 18ಕ್ಕೆ ನಿಗದಿಪಡಿಸಿತು.
ವಿಚಾರಣೆಯ ಸಂದರ್ಭ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಕೇಂದ್ರ ಸರಕಾರವನ್ನು ಪ್ರತಿನಿಧಿಸಿದ ವಕೀಲ ಮನಿಷ್ ಮೋಹನ್ ಅವರು ಈ ವಿಷಯ ಮುಖ್ಯವಾದುದು ಎಂದರು.
ಭ್ರಷ್ಟಾಚಾರ ಮತ್ತು ಕಪ್ಪು ಹಣ ಸೃಷ್ಟಿಯ ವಿರುದ್ಧ ಹೋರಾಡಲು ಸರಕಾರ ಸಂಕಲ್ಪ ಮಾಡಿದೆ ಎಂಬ ಬಲವಾದ ಸಂದೇಶವನ್ನು ನೀಡಲು, ಭ್ರಷ್ಟಾಚಾರವನ್ನು ತಡೆಗಟ್ಟಲು ಹಾಗೂ ಅಕ್ರಮವಾಗಿ ಸಂಗ್ರಹಿಸಿರುವ ಬೇನಾಮಿ ಆಸ್ತಿಯನ್ನು ವಶಪಡಿಸಿಕೊಳ್ಳಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ರಾಜ್ಯದ ಕರ್ತವ್ಯವಾಗಿದೆ ಎಂದು ಅರ್ಜಿದಾರ ಹಾಗೂ ವಕೀಲರಾದ ಅಶ್ವಿನಿ ಉಪಾಧ್ಯ ಅವರು ಹೇಳಿದರು.





