ಬಿಜೆಪಿಯಿಂದ 72 ಹೊಸ ಮುಖಗಳು ಕಣಕ್ಕೆ; ಬಂಡಾಯ ಬೇಗುದಿ ಶಮನಕ್ಕೆ ಹರಸಾಹಸ

ಬೆಂಗಳೂರು: ರಾಜ್ಯ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ 72 ಹೊಸ ಮುಖಗಳನ್ನು ಕಣಕ್ಕಿಳಿಸುವ ಮೂಲಕ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ಮಂದಿ ಹಿರಿಯ ಮುಖಂಡರಿಂದ ಎದುರಾಗಿರುವ ಸವಾಲನ್ನು ಸಮರ್ಥವಾಗಿ ಎದುರಿಸಲು ಹರಸಾಹಸ ಮಾಡಿದೆ.
ಬಿಜೆಪಿ ಟಿಕೆಟ್ ನಿರಾಕರಣೆ ಬಳಿಕ ಹಿರಿಯ ಮುಖಂಡರು ಪಕ್ಷ ಬದಲಿಸಿದ್ದರಿಂದ ವಿಚಲಿತರಾಗದ ಬಿಜೆಪಿ, ಮೇ 10ರಂದು ನಡೆಯುವ ಚುನಾವಣೆಗೆ ದೊಡ್ಡ ಸಂಖ್ಯೆಯಲ್ಲಿ ಹೊಸ ಮುಖಗಳನ್ನು ಪಕ್ಷದ ಅಭ್ಯರ್ಥಿಗಳಾಗಿ ಆಯ್ಕೆ ಮಾಡಿದ ಕೇಂದ್ರ ನಾಯಕತ್ವದ ಕ್ರಮವನ್ನು ಸಮರ್ಥಿಸಿಕೊಂಡಿದೆ.
ಜಗದೀಶ್ ಶೆಟ್ಟರ್ ಅವರಿಗೆ ಅವಮಾನ ಮಾಡಿರುವುದು ಇಡೀ ಲಿಂಗಾಯಿತ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಬಣ್ಣಿಸಿದ್ದು, ಹಿರಿಯ ಮುಖಂಡ ಬಿ.ಎಸ್.ಯಡಿಯೂರಪ್ಪ ಅವರ ಮೂಲಕ ಇಡೀ ಸಮುದಾಯವನ್ನು ತಲುಪಲು ಪಕ್ಷ ಕಾರ್ಯಯೋಜನೆ ರೂಪಿಸಿದೆ.
ಶೆಟ್ಟರ್ ಅವರಿಗೆ ಮುನ್ನ ಮತ್ತೊಬ್ಬ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಹಿರಿಯ ಮುಖಂಡರಾದ ಶ್ಯಾಮನೂರು ಶಿವಶಂಕರಪ್ಪ ಮತ್ತು ಎಂ.ಬಿ.ಪಾಟೀಲ್ ಅವರು, ಕಾಂಗ್ರೆಸ್ ಸೇರುವಂತೆ ಶೆಟ್ಟರ್ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶೆಟ್ಟರ್ ಅವರ ಮಗ, ಶಿವಶಂಕರಪ್ಪ ಅವರ ಮೊಮ್ಮಗಳನ್ನು ವಿವಾಹವಾಗಿದ್ದಾರೆ ಎಂಬ ಅಂಶವನ್ನು ಬಿಂಬಿಸಲು ಬಿಜೆಪಿ ಮುಂದಾಗಿದೆ.
"ಶೆಟ್ಟರ್ ಅವರಿಗೆ ರಾಜ್ಯಸಭಾ ಸ್ಥಾನ ಸೇರಿದಂತೆ ಕೇಂದ್ರ ಜವಾಬ್ದಾರಿಯನ್ನು ನೀಡುವ ಭರವಸೆ ನೀಡಲಾಗಿತ್ತು. ಆದರೂ ಸ್ವಾರ್ಥದಿಂದ ಪಕ್ಷ ತೊರೆದು ಬೇರೆ ಪಕ್ಷ ಸೇರಿದ ವ್ಯಕ್ತಿಯನ್ನು ಜನ ಬೆಂಬಲಿಸುವುದಿಲ್ಲ ಎಂಬ ವಿಶ್ವಾಸವಿದೆ" ಎಂದು ಬಿಜೆಪಿಯ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.