ಉದ್ಧವ್ ಠಾಕ್ರೆ - ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಭೇಟಿ, ಪ್ರತಿಪಕ್ಷಗಳ ಒಗ್ಗಟ್ಟಿನ ಕುರಿತು ಚರ್ಚೆ

ಮುಂಬೈ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಸೋಮವಾರ ಮುಂಬೈನಲ್ಲಿ ಶಿವಸೇನ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿದರು,
ಭೇಟಿಯ ವೇಳೆ ಅವರು 2024 ರ ರಾಷ್ಟ್ರೀಯ ಚುನಾವಣೆಗೆ ಮುಂಚಿತವಾಗಿ ಪ್ರತಿಪಕ್ಷಗಳ ಒಗ್ಗಟ್ಟಿನ ಕುರಿತು ಚರ್ಚಿಸಿದರು ಹಾಗೂ ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಲು ಬಿಜೆಪಿ ಸರಕಾರವು ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದರು.
"ಉದ್ಧವ್ ಜಿ ಅವರನ್ನು ಭೇಟಿ ಮಾಡಲು ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಸಂದೇಶವನ್ನು ತಿಳಿಸಲು ನಾನು ಇಲ್ಲಿಗೆ ಬಂದಿದ್ದೇನೆ. ಸಂದೇಶವು ತುಂಬಾ ಸ್ಪಷ್ಟವಾಗಿದೆ - ಭಾರತ ಹಾಗೂ ಮಹಾರಾಷ್ಟ್ರದ ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ, ಉದ್ಧವ್ ಜಿ ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳ ವಿರುದ್ಧ ಹೋರಾಡುತ್ತಿದ್ದಾರೆ. ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ಹಾಳು ಮಾಡಿದ್ದಾರೆ, ಅದನ್ನು ನಾವು ನೋಡಿದ್ದೇವೆ. ಈಡಿ ಮತ್ತು ಸಿಬಿಐ ಅನ್ನು ಉದ್ಧವ್ ಜಿ ಹಾಗೂ ಇತರ ಪಕ್ಷಗಳನ್ನು ಗುರಿಯಾಗಿಸಲು ಬಳಸಲಾಗುತ್ತಿದೆ ”ಎಂದು ವೇಣುಗೋಪಾಲ್ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.
ವೇಣುಗೋಪಾಲ್ ಅವರು "ವಿಶಾಲ ಪ್ರತಿಪಕ್ಷಗಳ ಏಕತೆ" ಗಾಗಿ ಕರೆ ನೀಡಿದರು, ಅದಕ್ಕಾಗಿಯೇ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಕಳೆದ ವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪ ಮುಖ್ಮಮಂತ್ರಿ ತೇಜಸ್ವಿ ಯಾದವ್ ಹಾಗೂ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾದರು. ಬಿಹಾರದ ಇಬ್ಬರು ನಾಯಕರು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ್ದರು, ದಿಲ್ಲಿ ಮದ್ಯ ನೀತಿ ಪ್ರಕರಣದಲ್ಲಿ ಸಾಕ್ಷಿಯಾಗಿ ಕೇಂದ್ರೀಯ ತನಿಖಾ ದಳ (ಸಿಬಿಐ) ಕೇಜ್ರಿವಾಲ್ ರನ್ನು ಪ್ರಶ್ನಿಸಿದೆ.
"ನಮಗೆ ಸ್ನೇಹವೇ ಕುಟುಂಬ. ನಾವು 25 ವರ್ಷಗಳ ಕಾಲ ಬಿಜೆಪಿಯನ್ನು ಬೆಂಬಲಿಸಿದ್ದೇವೆ, ಆದರೆ ಅವರಿಗೆ ಯಾರು ಸ್ನೇಹಿತ ಮತ್ತು ಯಾರು ಶತ್ರು,ಎಂದು ನಿಜವಾಗಿಯೂ ಅರ್ಥವಾಗಲಿಲ್ಲ, ಪ್ರತಿಯೊಬ್ಬರೂ ತಮ್ಮದೇ ಆದ ಸಿದ್ಧಾಂತವನ್ನು ಹೊಂದಿದ್ದಾರೆ. ಆದಾಗ್ಯೂ, ಪ್ರಜಾಪ್ರಭುತ್ವವನ್ನು ಉಳಿಸಲು ಅವರ ಹೋರಾಟ ನಡೆಯುತ್ತಿದೆ" ಎಂದು ಉದ್ದವ್ ಠಾಕ್ರೆ ಪ್ರತಿಕ್ರಿಯಿಸಿದರು.







