ಮಣಿಪುರ: ಬಿಜೆಪಿಗೆ ಹೊಸ ಸಂಕಟ, ಒಂದು ವಾರದೊಳಗೆ ಮತ್ತೊಬ್ಬ ಶಾಸಕ ರಾಜೀನಾಮೆ

ಇಂಫಾಲ: ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ಸಲಹೆಗಾರ ಥೋಕ್ಹೋಮ್ ರಾಧೇಶ್ಯಾಮ್ ರಾಜೀನಾಮೆ ನೀಡಿದ ನಂತರ ಮತ್ತೊಬ್ಬ ಬಿಜೆಪಿ ಶಾಸಕ ಪ್ರಮುಖ ಸರಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು ಹಾಗೂ ಕೇಂದ್ರ ನಾಯಕರನ್ನು ಭೇಟಿ ಮಾಡಲು ಹತ್ತಾರು ಅತೃಪ್ತ ಬಿಜೆಪಿ ಶಾಸಕರು ದಿಲ್ಲಿಯಲ್ಲಿ ಬೀಡುಬಿಟ್ಟಿದ್ದಾರೆ.
ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ಸಲಹೆಗಾರ ಸ್ಥಾನಕ್ಕೆ ಬಿಜೆಪಿ ಶಾಸಕ ಥೋಕ್ಹೋಮ್ ರಾದೇಶ್ಯಾಮ್ ರಾಜೀನಾಮೆ ನೀಡಿದ ನಾಲ್ಕು ದಿನಗಳಲ್ಲಿ ಮತ್ತೊಬ್ಬ ಬಿಜೆಪಿ ಶಾಸಕ ಕರಮ್ ಶ್ಯಾಮ್ ಸೋಮವಾರ ಮಣಿಪುರದ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮಣಿಪುರ ಬಿಜೆಪಿಯೊಳಗೆ ಹೊಸ ಸಮಸ್ಯೆ ತಲೆದೋರಬಹುದು, ರಾಜ್ಯದ ಸುಮಾರು ಒಂದು ಡಝನ್ ಪಕ್ಷದ ಶಾಸಕರು ನಾಯಕತ್ವದ ಬಗ್ಗೆ ತಮ್ಮ ಕಳವಳಗಳನ್ನು ಚರ್ಚಿಸಲು ಕೇಂದ್ರ ನಾಯಕರನ್ನು ಭೇಟಿ ಮಾಡಲು ದಿಲ್ಲಿಯಲ್ಲಿ ಮೊಕ್ಕಾಂ ಹೂಡಿದ್ದಾರೆ ಎಂದು ವರದಿಯಾಗಿದೆ.
ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ರನ್ನು ಬದಲಿಸಬೇಕು ಅಥವಾ ತಕ್ಷಣ ಸಚಿವ ಸಂಪುಟ ಪುನರ್ ರಚನೆ ಮಾಡಬೇಕು ಎಂದು ಅತೃಪ್ತ ಗುಂಪು ಕೇಂದ್ರ ನಾಯಕರನ್ನು ಒತ್ತಾಯಿಸಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ನವೆಂಬರ್ 21, 2022 ರಂದು ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಾಗಿನಿಂದ "ತಮಗೆ ಅಧ್ಯಕ್ಷರಾಗಿ ಯಾವುದೇ ಜವಾಬ್ದಾರಿಯನ್ನು ವಹಿಸದ ಕಾರಣ" ರಾಜೀನಾಮೆ ನೀಡುತ್ತಿದ್ದೇನೆ ಎಂದು ಕರಮ್ ಶ್ಯಾಮ್ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಶ್ಯಾಮ್ ಅವರು ಲಾಂಗ್ತಬಲ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.







