ಕೆ.ಆರ್ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿ ರಾಮದಾಸ್ ಬದಲಿಗೆ ಸಂತೋಷ್ ಆಪ್ತನಿಗೆ ಬಿಜೆಪಿ ಟಿಕೆಟ್: ಜಗದೀಶ್ ಶೆಟ್ಟರ್
ಸಂತೋಷ್, ನಳಿನ್ ಕುಮಾರ್ ಕಟೀಲ್ ವಿರುದ್ಧ ಮಾಜಿ ಸಿಎಂ ವಾಗ್ದಾಳಿ

ಹುಬ್ಬಳ್ಳಿ: ಮೈಸೂರಿನ ಕೆ.ಆರ್ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿಯಾಗಿದ್ದ ಹಾಲಿ ಶಾಸಕ ರಾಮದಾಸ್ ಬದಲಿಗೆ ಬಿ.ಎಲ್ ಸಂತೋಷ್ ಆಪ್ತನಿಗೆ ಟಿಕೆಟ್ ನೀಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಅವರು, 'ಕೆ.ಆರ್ ಕ್ಷೇತ್ರದ ಜನರೊಂದಿಗೆ ಒಳ್ಳೆಯ ಒಡನಾಟ ಹೊಂದಿದ್ದ ಶಾಸಕ ರಾಮದಾಸ್ ಸಂತೋಷ್ ಆಪ್ತ ಅಲ್ಲ. ಹಾಗಾಗಿಯೇ ಅವರ ಬದಲಿಗೆ ಶ್ರೀವತ್ಸಗೆ ನೀಡಲಾಗಿದೆ. ಶ್ರೀವತ್ಸ ಸಂತೋಷ್ ಅವರ ಆಪ್ತನಾಗಿದ್ದು, ಒಂದು ವೇಳೆ ಅಲ್ಲಿ ರಾಮದಾಸ್ ಬಂಡಾಯ ಎದ್ದರೆ ಗೆಲ್ಲುವುದಕ್ಕೆ ಆಗಲ್ಲ' ಎಂದು ತಿಳಿಸಿದರು.
'ರಾಮದಾಸ್ ಸ್ಪರ್ಧಿಸಿದರೆ ಅಲ್ಲಿ ಶೇ.100ರಷ್ಟು ಗೆಲುವು ಖಚಿತ. ಆದರೆ ಮತ್ತೊಬ್ಬ ಪ್ರಬಲ ಟಿಕೆಟ್ ಆಕಾಂಕ್ಷಿಯನ್ನೂ ಕಡೆಗಣಿಸಿ ಸಂತೋಷ್ ಆಪ್ತನಿಗೆ ಟಿಕೆಟ್ ನೀಡಲಾಗಿದೆ' ಎಂದು ಹೇಳಿದರು.
'ಬಿ.ಎಲ್ ಸಂತೋಷ್ ರನ್ನು ಕೇರಳದಲ್ಲಿ ಚುನಾವಣಾ ಉಸ್ತುವಾರಿ ಮಾಡಿದ್ದರು. ಆದರೆ ಅಲ್ಲಿ ಒಂದು ಸ್ಥಾನವೂ ಬರಲಿಲ್ಲ. ತಮಿಳುನಾಡಿಲ್ಲಿ ಎರಡು ಮೂರು ಸ್ಥಾನ ಅಷ್ಟೇ ಬಂತು. ಇವತ್ತು ಮತ್ತೆ ಕರ್ನಾಟಕದಲ್ಲಿ ಕಾರಬಾರು ಮಾಡುತ್ತಿದ್ದಾರೆ' ಕಿಡಿಕಾರಿದರು.
ಇದನ್ನೂ ಓದಿ: ಕೈ ತಪ್ಪಿದ ಬಿಜೆಪಿ ಟಿಕೆಟ್: ಮನೆಗೆ ಬಂದ ಪ್ರತಾಪ್ ಸಿಂಹ, ಶ್ರೀವತ್ಸರನ್ನು ಭೇಟಿ ಮಾಡಲು ನಿರಾಕರಿಸಿದ ಶಾಸಕ ರಾಮದಾಸ್
ನಳಿನ್ ಕುಮಾರ್ ಕಟೀಲ್ ವಿರುದ್ಧ ವಾಗ್ದಾಳಿ
'ನಳಿನ್ ಕುಮಾರ್ ಕಟೀಲ್ ಅವರ ರಾಜಾಧ್ಯಕ್ಷ ಅವಧಿ ಮುಗಿದಿದ್ದರೂ ರಾಜ್ಯ ಬಿಜೆಪಿಗೆ ಅಧ್ಯಕ್ಷರ ನೇಮಕ ಆಗಿಲ್ಲ. ಬಿ.ಎಲ್. ಸಂತೋಷ್ ಹೇಳಿದಂತೆ ನಳಿನ್ ಕುಮಾರ್ ಕೇಳುತ್ತಾರೆ. ಕಟೀಲ್ ಅವರದ್ದು ಕೆಲ ದಿನಗಳ ಹಿಂದೆ ಮಾತಾಡಿದ್ದ ಆಡಿಯೋ ಒಂದು ವೈರಲ್ ಆಗಿತ್ತು. ''ಯಡಿಯೂರಪ್ಪನವರ ಕಾಲ ಮುಗಿತು, ಮುಂದಿನ ಚುನಾವಣೆ ವೇಳೆ ಈಶ್ವರಪ್ಪ, ಶೆಟ್ಟರ್ ಮುಗಿಸುತ್ತೇವೆ'' ಎಂದಿದ್ದರು. ಅದೆಲ್ಲ ಸಂತೋಷ್ ಅವರ ಪ್ಲ್ಯಾನ್ ಆಗಿತ್ತು. ಈಗ ಅದು ಯಶಸ್ವಿಯಾಗಿದೆ' ಎಂದು ಶೆಟ್ಟರ್ ಆರೋಪಿಸಿದರು.







