ಬಿಜೆಪಿಗೆ ಸೇರುತ್ತೇನೆಂಬ ವರದಿಗೆ ಅಜಿತ್ ಪವಾರ್ ಪ್ರತಿಕ್ರಿಯಿಸಿದ್ದು ಹೀಗೆ…

ಮುಂಬೈ: ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಅಜಿತ್ ಪವಾರ್ (Ajit Pawar )ಅವರು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ತೆರಳಲು ಯೋಜಿಸುತ್ತಿದ್ದಾರೆ ಎಂಬ ವರದಿಯನ್ನು ಇಂದು ನಿರಾಕರಿಸಿದ್ದಾರೆ. ಮಾಧ್ಯಮಗಳು ಯಾವುದೇ ಕಾರಣವಿಲ್ಲದೆ ಈರೀತಿಯ ವದಂತಿಗಳನ್ನು ಹರಡುತ್ತಿವೆ ಎಂದು ಆರೋಪಿಸಿದ್ದಾರೆ.
"ಯಾವುದೇ ವದಂತಿಯಲ್ಲಿ ಯಾವುದೇ ಸತ್ಯವಿಲ್ಲ. ನಾನು ಎನ್‌ಸಿಪಿಯಲ್ಲಿದ್ದೇನೆ ಹಾಗೂ ನಾನು ಎನ್‌ಸಿಪಿಯಲ್ಲೇ ಇರುತ್ತೇನೆ" ಎಂದು ಅಜಿತ್ ಪವಾರ್ ಹೇಳಿದರು. ಎನ್‌ಸಿಪಿ ಹಾಗೂ ಮಹಾರಾಷ್ಟ್ರದ ಪ್ರತಿಪಕ್ಷಗಳ ಮೈತ್ರಿಯಲ್ಲಿ ಬಿರುಕು ಉಂಟಾಗಿದೆ ಎಂಬ ಮಾತನ್ನುಅವರು ತಳ್ಳಿಹಾಕಿದ್ದಾರೆ.
ಈ ಎಲ್ಲಾ ವದಂತಿಯಿಂದಾಗಿ ಎನ್‌ಸಿಪಿ ಕಾರ್ಯಕರ್ತರು ಗೊಂದಲಕ್ಕೊಳಗಾಗುತ್ತಿದ್ದಾರೆ ಎಂದಿರುವ ಮಾಜಿ ಉಪಮುಖ್ಯಮಂತ್ರಿ, "ಚಿಂತಿಸಬೇಡಿ ಎಂದು ನಾನು ಅವರಿಗೆ ಹೇಳಬಯಸುತ್ತೇನೆ, ಶರದ್ ಪವಾರ್ ನೇತೃತ್ವದಲ್ಲಿ ಎನ್‌ಸಿಪಿ ರಚನೆಯಾಗಿದೆ . ನಾವು ಅಧಿಕಾರದಲ್ಲಿ ಅಥವಾ ವಿರೋಧದಲ್ಲಿ ಕೆಲಸ ಮಾಡಿದ್ದೇವೆ" ಎಂದು ಅವರು ಹೇಳಿದರು.
ಇದಕ್ಕೂ ಮೊದಲು, ಅಜಿತ್ ಪವಾರ್ ಅವರ ಚಿಕ್ಕಪ್ಪ ಹಾಗೂ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಪಕ್ಷದಲ್ಲಿ ಬಿರುಕಾಗಿದೆ ಎನ್ನುವುದನ್ನು ಅಲ್ಲಗಳೆದರು. ಏಕನಾಥ ಶಿಂಧೆ ನೇತೃತ್ವದ ಸರಕಾರದಲ್ಲಿ ಸೇರಿಕೊಳ್ಳಲ ಶಾಸಕರು ಸಭೆ ನಡೆಸಿದ್ದಾರೆಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದರು.







