ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದ್ದ ಟಿಎಂಸಿ ನಾಯಕ ಮುಕುಲ್ ರಾಯ್ ದಿಲ್ಲಿಯಲ್ಲಿ ಪ್ರತ್ಯಕ್ಷ!

ಹೊಸ ದಿಲ್ಲಿ/ಕೋಲ್ಕತ್ತಾ: ಕೆಲವು ಗಂಟೆಗಳ ಕಾಲ ತಮ್ಮ ಕುಟುಂಬದ ಸದಸ್ಯರಿಂದ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದ್ದ ಟಿಎಂಸಿ ನಾಯಕ ಮುಕುಲ್ ರಾಯ್ ವಿಚಿತ್ರ ಸನ್ನಿವೇಶದಲ್ಲಿ ಸೋಮವಾರ ಸಂಜೆ ದಿಲ್ಲಿಗೆ ಆಗಮಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ಕೆಲ ಸಮಯ ಅಸ್ವಸ್ಥರಾದಂತೆ ಕಂಡು ಬಂದ 69 ವರ್ಷ ವಯಸ್ಸಿನ ಮುಕುಲ್ ರಾಯ್, ದಿಲ್ಲಿ ವಿಮಾನ ನಿಲ್ದಾಣದಲ್ಲಿ ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ಇರುವುದು ವಿಡಿಯೊದಲ್ಲಿ ದಾಖಲಾಗಿದೆ.
ರಾಜಧಾನಿಗೆ ಏಕೆ ಬಂದಿದ್ದೀರಿ ಎಂಬ ವರದಿಗಾರನ ಪ್ರಶ್ನೆಗೆ "ನನಗೆ ದಿಲ್ಲಿಯಲ್ಲಿ ಸ್ವಲ್ಪ ಕೆಲಸವಿದೆ. ನಾನು ಇಲ್ಲಿಗೆ ಬರಬಾರದೆ?" ಎಂದು ಮುಕುಲ್ ರಾಯ್ ಪ್ರಶ್ನಿಸಿದ್ದಾರೆ.
ನೀವು ಚಿಕಿತ್ಸೆಗಾಗಿ ಇಲ್ಲಿಗೆ ಬಂದಿದ್ದೀರಾ ಎಂಬ ವರದಿಗಾರನ ಪ್ರಶ್ನೆಗೆ, "ಇಲ್ಲ, ಇಲ್ಲ, ನಾನು ವಿಶೇಷ ಕೆಲಸಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ನಾನು ದಿಲ್ಲಿಗೆ ಬರಬಾರದೆ? ನಾನು ಇಲ್ಲಿ ಶಾಸಕ, ಸಂಸದನಾಗಿದ್ದೆ.." ಎಂದು ಮಾಜಿ ಸಂಸದರೂ ಆದ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2021ರಲ್ಲಿ ಬಿಜೆಪಿ ತೊರೆದು ಟಿಎಂಸಿ ಸೇರ್ಪಡೆಯಾಗಿದ್ದ ಮುಕುಲ್ ರಾಯ್ ಮತ್ತೆ ಬೇರೊಂದು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಅವರ ದಿಲ್ಲಿ ಭೇಟಿಗೆ ಮಹತ್ವ ಬಂದಿದ್ದು, ನನ್ನ ಭೇಟಿಗೆ ಯಾವುದೇ ವಿಶೇಷ ರಾಜಕೀಯ ಕಾರಣವಿಲ್ಲ ಎಂದು ಅವರು ಅಂತಹ ವದಂತಿಗಳನ್ನು ನಿರಾಕರಿಸಿದ್ದಾರೆ.
ಇದಕ್ಕೂ ಮುನ್ನ ಮಾಜಿ ರೈಲ್ವೆ ಸಚಿವರೂ ಆದ ಮುಕುಲ್ ರಾಯ್ ಕುಟುಂಬದ ಸದಸ್ಯರು ಅವರು ಪತ್ತೆಯಾಗುತ್ತಿಲ್ಲವೆಂದು ಪ್ರತಿಪಾದಿಸಿ ಪೊಲೀಸ್ ಠಾಣೆಯಲ್ಲಿ ಕಾಣೆ ಪ್ರಕರಣವನ್ನು ದಾಖಲಿಸಿದ್ದರು.







