ಟಿಕ್‌ಟಾಕ್ ನ ಬೆನಡ್ರಿಲ್ ಚಾಲೆಂಜ್ ಪ್ರಯತ್ನಿಸಿದ್ದ ಬಾಲಕ ಒಂದು ವಾರದ ಬಳಿಕ ನಿಧನ: ಪೋಷಕರಿಂದ ಇತರರಿಗೆ ಎಚ್ಚರಿಕೆ

ಓಹಿಯೋ: ಟಿಕ್‌ಟಾಕ್ ಬೆನಡ್ರಿಲ್ ಚಾಲೆಂಜ್ ಪ್ರಯತ್ನಿಸಿ ಸಾವಿಗೀಡಾಗಿರುವ ಅಮೆರಿಕಾದ ಓಹಿಯೊದಲ್ಲಿನ 13 ವರ್ಷದ ಬಾಲಕನ ಪೋಷಕರು, ಈ ಅಪಾಯಕಾರಿ ಸಾಮಾಜಿಕ ಮಾಧ್ಯಮ ಪ್ರವೃತ್ತಿಯ ಬಗ್ಗೆ ಇನ್ನಿತರ ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ.
ABC6.com ವರದಿಯ ಪ್ರಕಾರ, ಒಂದು ವಾರಕ್ಕೂ ಹೆಚ್ಚು ಕಾಲ ವೆಂಟಿಲೇಟರ್ ನೆರವಿನಲ್ಲಿದ್ದ ಜಾಕೋಬ್ ಸ್ಟೀವನ್ಸ್ ಎಂಬ ಬಾಲಕನು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಭ್ರಾಂತ ಸ್ಥಿತಿಯನ್ನು ಅನುಭವಿಸಲು ಆತ 12-14 ಆ್ಯಂಟಿ ಹಿಸ್ಟಮಿನ್ ಗುಳಿಗೆಗಳಾದ ಬೆನಡ್ರಿಲ್‌ನನ್ನು ನುಂಗಿದ್ದ ಎಂಬ ಸಂಗತಿಯನ್ನು ಆತನ ಕುಟುಂಬದ ಸದಸ್ಯರು ಬಹಿರಂಗಗೊಳಿಸಿದ್ದಾರೆ.
ಬೆನಡ್ರಿಲ್ ಗುಳಿಗೆಗಳ ತಯಾರಿಕೆಯ ಹೊಣೆ ಹೊತ್ತಿರುವ ಜಾನ್ಸನ್ ಆ್ಯಂಡ್ ಜಾನ್ಸನ್‌ನ ಘಟಕವೊಂದೂ ಕೂಡಾ ಈ ಬಗ್ಗೆ ತನ್ನ ಅಂತರ್ಜಾಲ ತಾಣದಲ್ಲಿ ಎಚ್ಚರಿಕೆ ನೀಡಿದ್ದು, ಈ ಅಪಾಯಕಾರಿ ಪ್ರವೃತ್ತಿಯನ್ನು ಕೂಡಲೇ ನಿಲ್ಲಿಸಬೇಕು ಎಂದು ಸೂಚಿಸಿದೆ. ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆ ಹಾಗೂ ಫೆಡರಲ್ ಔಷಧ ಪ್ರಾಧಿಕಾರಗಳೆರಡೂ ಬೆನಡ್ರಿಲ್ ಗುಳಿಗೆಯನ್ನು ಮಕ್ಕಳ ಕೈಗೆ ದೊರೆಯದಂತೆ ನೋಡಿಕೊಳ್ಳಬೇಕು ಎಂದು ಪೋಷಕರಿಗೆ ಸಲಹೆ ನೀಡಿವೆ.