ಬಿಜೆಪಿಯನ್ನು ಸೋಲಿಸುವುದೇ ನಿಜವಾದ ದೇಶಭಕ್ತಿ: ಡಾ.ಕೆ.ಪ್ರಕಾಶ್
ಸಿಪಿಐ-ಸಿಪಿಐ(ಎಂ) ಜಂಟಿ ರಾಜಕೀಯ ಸಮಾವೇಶ

ಮಂಗಳೂರು: ಪುಲ್ವಾಮಾ ದಾಳಿಯ ವಿಷಯದಲ್ಲಿ ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ನರೇಂದ್ರ ಮೋದಿ ಸರಕಾರದ ಮೇಲೆ ಮಾಡಿರುವ ಆರೋಪ ಬಿಜೆಪಿಯ ದೇಶಪ್ರೇಮವನ್ನು ಬಯಲು ಗೊಳಿಸಿದೆ. ಇಂತಹ ಬಿಜೆಪಿಯನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸುವುದೇ ನಿಜವಾದ ದೇಶಭಕ್ತಿಯಾಗಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ.ಕೆ. ಪ್ರಕಾಶ್ ಹೇಳಿದರು.
ನಗರದ ಡಾನ್‌ಬಾಸ್ಕೋ ಸಭಾಂಗಣದಲ್ಲಿ ಮಂಗಳವಾರ ನಡೆದ ಸಿಪಿಎಂ ಮತ್ತು ಸಿಪಿಐ(ಎಂ) ಜಂಟಿ ರಾಜಕೀಯ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬಿಜೆಪಿ ಸರಕಾರಗಳ ಸಂವಿಧಾನ ವಿರೋಧಿ ನಿಲುವುಗಳು ಮತ್ತು ಕೋಮುವಾದಿ ಕಾರ್ಯಾಚರಣೆಗಳು ದೇಶದ ಪ್ರಜಾಪ್ರಭುತ್ವವನ್ನು ಅಪಾಯಕ್ಕೊಡ್ಡಿವೆ. ಜನಸಾಮಾನ್ಯರು, ಕಾರ್ಮಿಕರು, ಮಹಿಳೆಯರು ಬಿಜೆಪಿ ಆಡಳಿತದಲ್ಲಿ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ತಾನು ತಿನ್ನುವುದಿಲ್ಲ. ಬೇರೆಯವರಿಗೆ ತಿನ್ನಲಿಕ್ಕೆ ಬಿಡುವುದಿಲ್ಲ ಎಂದು ಹೇಳಿದ ಸರಕಾರದಲ್ಲಿ ಎಲ್ಲರೂ ತಿನ್ನುವವರೇ ಆಗಿದ್ದಾರೆ. ಭ್ರಷ್ಟಾಚಾರ ಮಿತಿ ಮೀರಿದೆ. ಶೇ.40 ಕಮಿಷನ್ ಕುಖ್ಯಾತಿಯನ್ನು ಸರಕಾರ ಪಡೆದಿದೆ. ಪ್ರಧಾನಿಗೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಬಗ್ಗೆ ಯಾವುದೇ ಆಸಕ್ತಿ ಇಲ್ಲ ಎಂದು ಡಾ. ಕೆ. ಪ್ರಕಾಶ್ ಆರೋಪಿಸಿದರು.
ಸಿಪಿಎಂ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿಯನ್ನು ಸೋಲಿಸುವ ಏಕೈಕ ಉದ್ದೇಶದಿಂದ ಎಡ ಪಕ್ಷಗಳು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸದೆ ಜಾತ್ಯತೀತ ಪಕ್ಷಗಳ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿದೆ ಎಂದರು.
ಸಿಪಿಐ ರಾಜ್ಯ ಸಮಿತಿಯ ಸಹ ಕಾರ್ಯದರ್ಶಿ ಕಾ.ಬಿ.ಅಮ್ಜದ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ ಮಾತನಾಡಿದರು.
ವೇದಿಕೆಯಲ್ಲಿ ಸಿಪಿಎಂ ರಾಜ್ಯ ಸಮಿತಿ ಸದಸ್ಯ ವಸಂತ ಆಚಾರಿ, ಸಿಪಿಐ ಹಿರಿಯ ಮುಖಂಡ ವಿ.ಕುಕ್ಯಾನ್ ಉಪಸ್ಥಿತರಿದ್ದರು. ಸೀತಾರಾಮ ಬೇರಿಂಜೆ ಸ್ವಾಗತಿಸಿದರು. ಸುನೀಲ್ ಕುಮಾರ್ ಬಜಾಲ್ ವಂದಿಸಿದರು.