ವರುಣಾದಲ್ಲಿ ಬಿಜೆಪಿ ಅಭ್ಯರ್ಥಿ ಸೋಮಣ್ಣ, ಪ್ರತಾಪ್ ಸಿಂಹಗೆ ಗ್ರಾಮಸ್ಥರ ತರಾಟೆ

ಮೈಸೂರು: ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕೆ ತೆರಳಿದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹಾಗೂ ಸಂಸದ ಪ್ರತಾಪ್ ಸಿಂಹರನ್ನು ಗ್ರಾಮಸ್ಥರು ತರಾಟಗೆ ತೆಗೆದುಕೊಂಡ ಘಟನೆ ನಡೆಯಿತು.
ಮೈಸೂರು ತಾಲೂಕು ವರುಣಾ ವಿಧಾನಸಭಾ ಕ್ಷೇತ್ರದ ಲಲಿತಾದ್ರಿಪುರ ಗ್ರಾಮಕ್ಕೆ ಮಂಗಳವಾರ ಮತಯಾಚನೆಗಾಗಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹಾಗೂ ಸಂಸದ ಪ್ರತಾಪ್ ಸಿಂಹ ತೆರಳಿದ್ದರು. ಈ ವೇಳೆ ಗ್ರಾಮಸ್ಥರು 'ನೀವು ಯಾವ ಅಭಿವೃದ್ಧಿ ಮಾಡಿದ್ದೀರಿ? ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ನೀವು ಯಾವ ಕೊಡುಗೆಯನ್ನು ನೀಡಿದ್ದೀರಿ?' ಎಂದು ಪ್ರಶ್ನೆಗಳ ಸುರಿಮಳೆಗೈದರು.
'ನೀವು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ನಾವು ನಿಮ್ಮ ಬಳಿ ಬಂದಿದ್ದೆವು. ಆಗ ನೀವು ನಮ್ಮ ಮನವಿಗೆ ಸ್ಪಂದಿಸಲಿಲ್ಲ, ಈಗ ನೀವು ಮತ ಕೇಳಲು ಬಂದರೆ ನಾವು ಯಾಕೆ ಮತ ನೀಡಬೇಕು' ಎಂದು ಪ್ರಶ್ನಿಸಿದರು.
ಇದೇ ವೇಳೆ ಇದರ ವೀಡಿಯೋ ಮಾಡುತ್ತಿದ್ದ ವ್ಯಕ್ತಿಯ ಮೊಬೈಲ್ ಕಿತ್ತುಕೊಳ್ಳಲು ಸೋಮಣ್ಣ ಹಾಗೂ ಸಂಸದ ಪ್ರತಾಪ್ ಸಿಂಹ ಯತ್ನಿಸಿದ್ದಾರೆನ್ನಲಾಗಿದ್ದು, ಇದರಿಂದ ಮತ್ತಷ್ಟು ಆಕ್ರೋಶಗೊಂಡ ಗ್ರಾಮಸ್ಥರು, ''ನೀವು ಏನು ಅಭಿವೃದ್ಧಿ ಮಾಡಿದ್ದೀರಿ ಎಂದು ಮತ ಕೇಳುತ್ತಿದ್ದೀರಿ. ನೀವು ನೋಡಿದರೆ ಬೆಂಗಳೂರಿನವರು. ಇಲ್ಲಿ ಬಂದು ಇರಲು ಸಾಧ್ಯವೇ? ಜೊತೆಗೆ ಈ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು? ಎಂದು ತರಾಟೆಗೆ ತೆಗೆದುಕೊಂಡರು. ಜೊತೆಗೆ ಯಾಕೆ ವೀಡಿಯೋ ಮಾಡುವ ಮೊಬೈಲ್ ಕಿತ್ತುಕೊಳ್ಳುತ್ತೀರಿ'' ಎಂದು ಪ್ರಶ್ನೆ ಮಾಡಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ವಿ.ಸೋಮಣ್ಣ ಅವರಿಗೆ ಆರಂಭಿಕ ಹಿನ್ನಡೆಯಾಗಿದ್ದು, ನಿಮ್ಮ ಕೊಡುಗೆ ಏನು ಸ್ಪಷ್ಟಪಡಿಸಿ ಎಂದು ಗ್ರಾಮಸ್ಥರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಬಿಜೆಪಿಯ ಹರಕೆಯ ಕುರಿ ಮತ್ತು ವರುಣಾದ ಮನೆ ಮಗನ ನಡುವಿನ ಚುನಾವಣೆ ಇದು: ಸಿದ್ದರಾಮಯ್ಯ







