ಬೆಡಿಎಸ್ ಬಂಡಾಯ ಅಭ್ಯರ್ಥಿ ಅಶ್ರಫ್ ಕಲ್ಲೇಗ ನಾಮಪತ್ರ ಸಲ್ಲಿಕೆ

ಪುತ್ತೂರು: ಜೆಡಿಎಸ್‍ನ ಬಂಡಾಯ ಅಭ್ಯರ್ಥಿಯಾಗಿರುವ ಮಹಮ್ಮದ್ ಅಶ್ರಫ್ ಕಲ್ಲೇಗ ಅವರು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಮಂಗಳವಾರ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಬೆಳಗ್ಗೆ ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿರುವ ಚುನಾವಣಾ ಕಚೇರಿಗೆ ತಂಡದೊಂದಿಗೆ ಆಗಮಿಸಿದ ಅವರು ಸಹಾಯಕ ಕಮೀಷನರ್ ಗಿರೀಶ್ ನಂದನ್ ಅವರಿಗೆ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದರು.
ಈ ಸಂದರ್ಭದಲ್ಲಿ ಲೋಕನಾಥ ಪಕ್ಕಳ, ಸುರೇಶ್ ಕುಮಾರ್, ಚಂದ್ರ ಬೀರಿಗ ಮತ್ತು ಸಿದ್ದೀಕ್ ಕಲ್ಲೇಗ ಉಪಸ್ಥಿತರಿದ್ದರು.
ಜೆಡಿಎಸ್‍ನ ಟಿಕೇಟ್ ಆಕಾಂಕ್ಷಿಯಾಗಿದ್ದ ಅಶ್ರಫ್ ಕಲ್ಲೇಗ ಅವರು ಕೊನೆಯ ಕ್ಷಣದಲ್ಲಿ ತಮಗೆ ಪಕ್ಷದ ಟಿಕೇಟ್ ಕೈತಪ್ಪಿದ ಹಿನ್ನಲೆಯಲ್ಲಿ ಬಂಡಾಯ ಸ್ಪರ್ಧೆಗೆ ಮುಂದಾಗಿದ್ದರು. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪ ಸಂಖ್ಯಾತ ಮತದಾರರು ಪ್ರಥಮ ಸ್ಥಾನದಲ್ಲಿದ್ದು, ಅಲ್ಪ ಸಂಖ್ಯಾತ ಸಮುದಾಯಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ತಾನು ಸ್ಪರ್ಧೆ ಮಾಡುತ್ತಿರುವುದಾಗಿ ಮಾದ್ಯಮಕ್ಕೆ ತಿಳಿಸಿದ ಅವರು ಈ ಹಿಂದೆ 3 ಬಾರಿ ಜೆಡಿಎಸ್ ಪಕ್ಷದಲ್ಲಿ ಸ್ಪರ್ಧಿಸಲು ನನಗೆ ಅವಕಾಶಗಳಿದ್ದರೂ ದಿನೇಶ್ ಗೌಡ, ಐಸಿ ಕೈಲಾಸ್ ಮತ್ತು ಶಕುಂತಳಾ ಶೆಟ್ಟಿ ಅವರಿಗೆ ಅವಕಾಶ ನೀಡುವಂತೆ ವರಿಷ್ಠರ ಸೂಚನೆ ಮೇರೆಗೆ ನಾನು ಸ್ಪರ್ಧಾಕಣದಿಂದ ವಂಚಿತನಾಗಿದ್ದೆ. ಈ ಬಾರಿ ನನ್ನ ಹೆಸರು ಮಾತ್ರ ಜಿಲ್ಲಾ ಸಮಿತಿಯಿಂದ ರಾಜ್ಯ ಕ್ಕೆ ಹೋಗಿತ್ತು. ಆದರೆ ಕೊನೆಯ ಕ್ಷೇಣದಲ್ಲಿ ಕಾಂಗ್ರೆಸ್‍ನಿಂದ ಪಕ್ಷಾಂತರಗೊಂಡಿದ್ದ ದಿವ್ಯಪ್ರಭಾ ಚಿಲ್ತಡ್ಕ ಅವರಿಗೆ ಅವಕಾಶ ನೀಡಿ ನನಗೆ ವಂಚನೆ ಮಾಡಲಾಗಿದೆ ಎಂದು ಅವರು ದೂರಿದ್ದಾರೆ.