ಕೋಟ ಶ್ರೀನಿವಾಸ ಪೂಜಾರಿಯ ‘ಭಯೋತ್ಪಾದಕ’ ಹೇಳಿಕೆ ವಿರುದ್ಧ ಗೋಪಾಲ ಪೂಜಾರಿ ಕಿಡಿ

ಬೈಂದೂರು, ಎ.18: ಸಚಿವ ಕೋಟ ಶ್ರೀನಿವಾಸ ಪೂಜಾರಿ ನನ್ನನ್ನು ಮತ್ತು ಪಕ್ಷದ ಕಾರ್ಯಕರ್ತರನ್ನು ಭಯೋತ್ಪಾದಕ ಎಂದು ಬಿಂಬಿಸಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಒಂದೇ ಒಂದು ಭಯೋತ್ಪಾದನೆಗೆ ಬೆಂಬಲ ಕೊಟ್ಟಿರುವ ಕೇಸುಗಳಿದ್ದರೆ ತೋರಿಸಲಿ. ಇಲ್ಲವಾದಲ್ಲಿ ಈ ಕ್ಷೇತ್ರದ ಜನರೆದುರುವ ಕ್ಷಮೆ ಕೇಳಬೇಕು. ನಿಮ್ಮ ಸುಳ್ಳುಗಳು ಇಲ್ಲಿಗೆ ಕೊನೆಯಾಗಬೇಕು ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಹೇಳಿದ್ದಾರೆ.
ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೊದಲು ಯಡ್ತರೆ ಬೈಪಾಸ್‌ನಿಂದ ಪಾದಯಾತ್ರೆ ನಡೆಸಿ ಬಳಿಕ ಬೈಂದೂರು ಹೊಸ ಬಸ್ ನಿಲ್ದಾಣದ ಬಳಿ ಇಂದು ಹಮ್ಮಿಕೊಳ್ಳಲಾದ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಭಯೋತ್ಪಾದನೆಯ ಬಗ್ಗೆ ಮಾತನಾಡುವ ನೈತಿಕ ಹಕ್ಕು ಶ್ರೀನಿವಾಸ ಪೂಜಾರಿ ಅವರಿಗಿಲ್ಲ. ಅವರದೇ ಪಕ್ಷದ ಕಾರ್ಯಕರ್ತ ಯಡಮೊಗೆ ಉದಯ ಗಾಣಿಗ ಕೊಲೆ, ಕೋಟ ಅವಳಿ ಕೊಲೆ ಪ್ರಕರಣದ ಆರೋಪಿಗಳು ಯಾರು ಎನ್ನುವುದು ತಿಳಿದಿಲ್ಲವೇ? ಬಿಜೆಪಿ ಪಕ್ಷದ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಯಾದಾಗ ನಿಮ್ಮ ಪಕ್ಷದ ಕಾರ್ಯಕರ್ತರು ಓಡಿಸಿಕೊಂಡು ಬಂದದ್ದು ಯಾರನ್ನ ಎನ್ನುವುದು ನಿಮ್ಮ ಗಮನಕ್ಕಿರಲಿ. ಶ್ರೀನಿವಾಸ ಪೂಜಾರಿಯ ವರಿಗೆ ಅಧಿಕಾರದ ಮದ ಏರಿದೆ ಎಂದು ಅವರು ಟೀಕಿಸಿದರು.
ನಾಲ್ಕು ಬಾರಿ ಅಧಿಕಾರದಲ್ಲಿದ್ದಾಗ ರಾಜಕೀಯ ಮಾಡಿದವನಲ್ಲ. ಬಿಜೆಪಿ ಗರಂತೆ ಸುಳ್ಳು ಭರವಸೆಗಳನ್ನು ಕೊಟ್ಟಿಲ್ಲ. ಕೊಟ್ಟ ಎಲ್ಲ ಭರವಸೆಗಳನ್ನು ಅವಧಿಯಲ್ಲಿ ಈಡೇರಿಸಿದ್ದೇನೆ. ಬೈಂದೂರು ಪ್ರತ್ಯೇಕ ತಾಲೂಕು, ಆಡಳಿತ ಸೌಧಕ್ಕೆ 10 ಕೋಟಿ ರೂ. ಹಣ ಬಿಡುಗಡೆ, ಐಟಿಐ ಕಾಲೇಜು, ಕೆಇಬಿ ಸಬ್ ಡಿವಿಜನ್, ಶಾಸಕರ ಕಚೇರಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ಬೈಂದೂರು ಜನತೆಗೆ ನೀಡಿದ್ದೇನೆ. ಬೆಲೆ ಏರಿಕೆಯಿಂದಾಗಿ ಜನರು ಹೈರಾಣಾಗಿದ್ದಾರೆ. ಮತ್ತೆ ಜನಪರ ಸರಕಾರ ಬೇಕಾದರೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕಾಂಗ್ರೆಸ್ ಜಿಲ್ಲಾ ವಕ್ತಾರ ವಿಕಾಸ್ ಹೆಗ್ಡೆ, ಬೈಂದೂರು ಬ್ಲಾಕ್ ಅಧ್ಯಕ್ಷ ಮದನ್ ಕುಮಾರ್, ವಂಡ್ಸೆ ಬ್ಲಾಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಸಂಪಿಗೇಡಿ ಸಂಜೀವ ಶೆಟ್ಟಿ, ರಾಜು ಪೂಜಾರಿ, ಪ್ರಕಾಶ್ಚಂದ್ರ ಶೆಟ್ಟಿ ಕಂಬದಕೋಣೆ, ವಿಜಯ್ ಶೆಟ್ಟಿ ಕಾಲ್ತೋಡು, ರಮೇಶ್ ಗಾಣಿಗ ಕೊಲ್ಲೂರು, ವಾಸುದೇವ ಯಡಿಯಾಳ, ಗೌರಿ ದೇವಾಡಿಗ, ಮಂಜುಳಾ ದೇವಾಡಿಗ, ಪ್ರಸನ್ನ ಕುಮಾರ ಶೆಟ್ಟಿ ಕೆರಾಡಿ, ಪ್ರಚಾರ ಸಮಿತಿಯ ಸುಬ್ರಹ್ಮಣ್ಯ ಭಟ್, ಶೇಖರ್ ಪೂಜಾರಿ, ಅರವಿಂದ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
"ಬಿದ್ದು ಮೊಣಕಾಲಿಗೆ ಪೆಟ್ಟಾದಾಗ ನನಗೆ ನೋವಾಗಿರಲಿಲ್ಲ. ಆದರೆ ನಾಲ್ಕು ಬಾರಿ ಶಾಸಕನಾಗಿ ಈ ಕ್ಷೇತ್ರದ ಜನರ ಪ್ರಾಮಾಣಿಕ ಸೇವೆ ಮಾಡಿದ ನನಗೆ ಹಾಗೂ ನನ್ನ ಕಾರ್ಯಕರ್ತರಿಗೆ ಭಯೋತ್ಪಾದಕರು ಎಂದು ಕರೆದದ್ದು ಮನಸ್ಸಿಗೆ ಭಾರೀ ನೋವು ಉಂಟು ಮಾಡಿದೆ. ಯಾವ ಭಯೋತ್ಪಾದಕರು ಎಂದು ಕೋಟ ಶ್ರೀನಿವಾಸ ಪೂಜಾರಿ ನನ್ನನ್ನು, ನನ್ನ ಕಾರ್ಯಕರ್ತನ್ನು ಕರೆದರೋ ಅವರಿಗೆ ಚುನಾವಣೆಯಲ್ಲಿ ನೀವೆಲ್ಲರೂ ತಕ್ಕ ಉತ್ತರ ಕೊಡಬೇಕು".
-ಗೋಪಾಲ ಪೂಜಾರಿ, ಬೈಂದೂರು ಕಾಂಗ್ರೆಸ್ ಅಭ್ಯರ್ಥಿ
