ಉಡುಪಿ ಜಿಲ್ಲೆಯಲ್ಲಿ ಮಂಗಳವಾರ 9 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಉಡುಪಿ, ಎ.18: ಮೇ 10ರಂದು ನಡೆಯುವ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ನಾಲ್ಕನೇ ದಿನವಾದ ಮಂಗಳವಾರ ಜಿಲ್ಲೆಯಲ್ಲಿ 9 ಮಂದಿ ಅಭ್ಯರ್ಥಿಗಳು ಒಟ್ಟು 15 ನಾಮಪತ್ರ ಗಳನ್ನು ಸಲ್ಲಿಸಿದ್ದಾರೆ.
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕೆ.ಗೋಪಾಲ ಪೂಜಾರಿ, ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ದಿನೇಶ್ ಹೆಗ್ಡೆ ಮೊಳಹಳ್ಳಿ, ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ವಿನಯ್ ಕುಮಾರ್ ಸೊರಕೆ ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮುನಿಯಾಲು ಉದಯ ಕುಮಾರ ಶೆಟ್ಟಿ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಉಳಿದಂತೆ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಜಾತ್ಯತೀತ ಜನತಾದಳದ ಅಭ್ಯರ್ಥಿಯಾಗಿ ಶ್ರೀಕಾಂತ್ ಪೂಜಾರಿ, ಪಕ್ಷೇತರ ಅಭ್ಯರ್ಥಿಗಳಾಗಿ ಪ್ರಮೋದ್ ಮುತಾಲಿಕ್, ಡಾ.ಮಮತಾ ಹೆಗ್ಡೆ, ಕೆ.ಹರೀಶ್ ಅಧಿಕಾರಿ, ಸುಧಾಕರ ಆಚಾರ್ಯ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಈ ಮೂಲಕ ಜಿಲ್ಲೆಯ ಬೈಂದೂರು ಕ್ಷೇತ್ರದಲ್ಲಿ 4, ಕುಂದಾಪುರ ಕ್ಷೇತ್ರದಲ್ಲಿ 7, ಕಾಪು ಕ್ಷೇತ್ರದಲ್ಲಿ 4, ಉಡುಪಿಯಲ್ಲಿ 4 ಹಾಗೂ ಕಾರ್ಕಳ ಕ್ಷೇತ್ರದಲ್ಲಿ 10 ನಾಮಪತ್ರಳು ಸಲ್ಲಿಕೆಯಾಗಿವೆ.
ನಾಮಪತ್ರಗಳನ್ನು ಸಲ್ಲಿಸಲು ಎ.20 ಕೊನೆಯ ದಿನವಾಗಿರುತ್ತದೆ. ಎ.21ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಎ.24 ನಾಮಪತ್ರ ಹಿಂದೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ. ಮೇ 10ರಂದು ಚುನಾವಣೆ ನಡೆಯಲಿದೆ.










