ವಿಶ್ವ ಪರಂಪರೆ ದಿನಾಚರಣೆ: ಮಂಗಳೂರಿನಲ್ಲಿ ವಿಶೇಷ ಚಿತ್ರಕಲೆ ಪ್ರದರ್ಶನ

ಮಂಗಳೂರು: ವಿಶ್ವ ಪರಂಪರೆ ದಿನಾಚರಣೆಯ ಪ್ರಯುಕ್ತ ದ.ಕ.ಜಿಲ್ಲೆಯ ಅಂಚೆ ಚೀಟಿ ಮತ್ತು ನಾಣ್ಯಗಳ ಸಂಗ್ರಹ ಕಾರರ ಸಮಿತಿಯ ವತಿಯಿಂದ ನಗರದ ಬಿಜೈಯ ಶ್ರೀಮಂತಿ ಬಾಯಿ ಸ್ಮಾರಕ ಸರಕಾರಿ ವಸ್ತು ಸಂಗ್ರಹಾಲಯ ದಲ್ಲಿ ದ.ಕ.ಜಿಲ್ಲೆಯ ಪರಂಪರೆಗೆ ಸಂಬಂಧಿಸಿದ ವಿಶೇಷ ಚಿತ್ರಕಲೆಯನ್ನು ಮಂಗಳವಾರ ಪ್ರದರ್ಶಿಸಲಾಯಿತು.
ವಿಶೇಷ ಅಂಚೆ ಚೀಟಿ, ಗಾಂಧೀಜಿಯ ಅಂಚೆ ಲಕೋಟೆಗಳು, ಪಾರಂಪರಿಕ ಗೃಹಬಳಕೆ ಸಾಮಾಗ್ರಿಗಳು, ನಾಣ್ಯ ಗಳು, ಕರಾವಳಿಯ ಪ್ರಥಮ ಕೈ ಗಡಿಯಾರ ಸಂಗ್ರಹಗಳು, ಕಾವಿಕಲೆಯ ಚಿತ್ರಕಲೆಗಳು, ಹಾಗೂ ಕರಾವಳಿ ಚಿತ್ರ ಕಲಾ ಚಾವಡಿ ಸದಸ್ಯರ ಅಪರೂಪದ ಪಾರಂಪರಿಕ ಚಿತ್ರಕಲೆಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದ ಅಂಚೆ ಇಲಾಖೆಯ ಹರ್ಷ ಅವರು ಕರ್ನಲ್ ಮಿರಾಜಕರ್‌ರ ವಿಶೇಷ ಅಂಚೆ ಚೀಟಿ ಲಕೋಟೆಯ ಭಾವಚಿತ್ರವನ್ನು ಅನಾವರಣಗೊಳಿಸಿದರು. ಈ ಸಂದರ್ಭ ಸಿಇಒ ಮತದಾನ ಜಾಗೃತಿ ಕುರಿತು ವಿಶೇಷ ಭಾವಚಿತ್ರಗಳನ್ನು ವಿಶೇಷವಾಗಿ ಪ್ರದರ್ಶಿಸಲಾಯಿತು.
ದ.ಕ.ಜಿಪಂ ಸಿಇಒ ಡಾ.ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಸಮಿತಿಯ ಸದಸ್ಯರಾದ ಪ್ರಭಾಕರ ಕಾಮತ್, ಶಿವಕುಮಾರ್, ಸಂತೋಷ್ ಪ್ರಭು, ವೀಣಾ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.