ನನ್ನ ಎಲ್ಲಾ ನೋವು ನುಂಗಿಕೊಂಡು ಬಿಜೆಪಿಯಲ್ಲೇ ಇರುತ್ತೇನೆ: ಟಿಕೆಟ್ ವಂಚಿತ ಶಾಸಕ ಎಸ್.ಎ.ರಾಮದಾಸ್

ಮೈಸೂರು,ಎ.18: ನಾನು ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ ಎಂದು ಬಿಜೆಪಿ ಟಿಕೆಟ್ ವಂಚಿತ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಸ್ಪಷ್ಟಪಡಿಸಿದರು.
ನಗರದ ವಿದ್ಯಾರಣ್ಯಪುರಂ ನಲ್ಲಿರುವ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನಗೆ ಬಿಜೆಪಿ ಪಕ್ಷ ಮುಖ್ಯ, ಪ್ರಧಾನಮಂತ್ರಿ ನರೇಂದ್ರ ಮೋದಿ ಮುಖ್ಯ. ಆದ ಕಾರಣ ನಾನು ಬಿಜೆಪಿ ಬಿಡಲ್ಲ, ಬಿಜೆಪಿ ಪ್ರಾಥಮಿಕ ಸ್ಥಾನಕ್ಕೂ ರಾಜಿನಾಮೆ ನೀಡಲ್ಲ. ನನ್ನ ಎಲ್ಲಾ ನೋವು ನುಂಗಿಕೊಂಡು ಪಕ್ಷದಲ್ಲೆ ಇರುತ್ತೇನೆ. ಆದರೆ ನನಗೆ ಟಿಕೆಟ್ ತಪ್ಪಿಸಿದವರು ಯಾರೆಂದು ಪೋಸ್ಟ್ ಮಾರ್ಟಂ ಮಾಡಲು ಇಚ್ಚಿಸುವುದಿಲ್ಲ ಎಂದು ರಾಮದಾಸ್ ಹೇಳಿದರು.
ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಅವರು ನಾಮಪತ್ರ ಸಲ್ಲಿಸುವ ವೇಳೆ ನಾನು ಹಾಜರಿರುತ್ತೇನೆ. ಶ್ರೀವತ್ಸ ಗೆಲುವಿಗೆ ನಾನು ಶ್ರಮ ಪಡುತ್ತೇನೆ. ಬಿಜೆಪಿ ಗೆಲ್ಲಿಸುತ್ತೇನೆ ಎಂದು ರಾಮದಾಸ್ ತಿಳಿಸಿದರು.
ನನಗೆ ಅನ್ಯಾಯವಾಗಿರುವ ಬಗ್ಗೆ ಬೇಸರ ಇದೆ. ದೆಹಲಿ ನಾಯಕರು ನನ್ನ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ನಾನು ಬಿಜೆಪಿ ಬಿಡುವುದಿಲ್ಲ, ನನಗೆ ನೋವಾಗಿರುವ ಬಗ್ಗೆ ಶ್ರೀಶ್ರೀಚಾಮುಂಡೇಶ್ವರಿ ದೇವಿ ಸನ್ನಿದಿಯಲ್ಲಿ ಕಣ್ಣೀರು ಹಾಕಿದ್ದೇನೆ. ನನಗೆ ವೈಯಕ್ತಿಕವಾಗಿ ಪಕ್ಷಕ್ಕಿಂತ ದೇಶ ಮುಖ್ಯ ಹಾಗಾಗಿ ದೇಶದ ಅಭಿವೃದ್ಧಿಗಾಗಿ ನಾನು ಬಿಜೆಪಿಯಲ್ಲೇ ಇರುತ್ತೇನೆ ಎಂದು ಹೇಳಿದರು.







