ಕಾಂಗ್ರೆಸ್‌ನ ನಾಲ್ಕನೇ ಪಟ್ಟಿ ಬಿಡುಗಡೆ: ಮಂಗಳೂರು ಉತ್ತರಕ್ಕೆ ದೊರೆಯದ ಉತ್ತರ

ಮಂಗಳೂರು, ಎ.18: ಮುಂಬರುವ ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ನಾಲ್ಕನೇ ಪಟ್ಟಿ ಪ್ರಕಟಗೊಂಡಿದ್ದು, ಮಂಗಳೂರು ನಗರ ಉತ್ತರಕ್ಕೆ ಕಾಂಗ್ರೆಸ್‌ನ ಅಭ್ಯರ್ಥಿ ಹೆಸರು ಕಾಣಿಸಿಕೊಂಡಿಲ್ಲ.
ನಾಲ್ಕನೇ ಪಟ್ಟಿಯಲ್ಲಿ ಏಳು ಮಂದಿ ಅಭ್ಯರ್ಥಿಗಳ ಹೆಸರಿದ್ದು, ಆದರೆ ಕುತೂಹಲ ಕೆರಳಿಸಿರುವ ಮಂಗಳೂರು ನಗರ ಉತ್ತರ ಕ್ಷೇತ್ರದಿಂದ ಕಣಕ್ಕಿಳಿಯಲಿರುವ ಅಭ್ಯರ್ಥಿಯ ಹೆಸರು ಇನ್ನೂ ಘೋಷಣೆಯಾಗಿಲ್ಲ.
ನಾಮಪತ್ರ ಸಲ್ಲಿಕೆಗೆ ಇನ್ನೆರಡು ದಿನಗಳು ಮಾತ್ರ ಬಾಕಿ ಉಳಿದಿವೆ. ಈಗಾಗಾಲೇ ದ.ಕ. ಜಿಲ್ಲೆಯ 8 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿಯನ್ನು ಪ್ರಕಟಿಸಿದೆ. ರಾಜ್ಯದಲ್ಲಿ 224 ಕ್ಷೇತ್ರಗಳ ಪೈಕಿ 216 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ನಡೆದಿದೆ. ಮಂಗಳೂರು ನಗರ ಉತ್ತರ ಸೇರಿದಂತೆ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟನೆಗೆ ಬಾಕಿ ಇದೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮತ್ತು ಮಾಜಿ ಶಾಸಕ ಮೊಯ್ದಿನ್ ಬಾವ ಟಿಕೆಟ್‌ನ ರೇಸ್‌ನಲ್ಲಿದ್ದಾರೆ. ಇಬ್ಬರೂ ತಮಗೆ ದೊರೆಯಬಹುದೆಂದು ಹೇಳಿಕೊಳ್ಳುತ್ತಿದ್ದಾರೆ. ಯಾರಿಗೆ ಎನ್ನುವುದು ನಿಗೂಢವಾಗಿದೆ. ಇವರಲ್ಲಿ ಒಬ್ಬರಿಗೆ ಟಿಕೆಟ್ ಖಚಿತ. ಇವರನ್ನು ಹೊರತುಪಡಿಸಿ ಇನ್ನೊಬ್ಬರಿಗೆ ಟಿಕೆಟ್ ಸಿಗುವ ಅವಕಾಶ ಇಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. ಕಾಂಗ್ರೆಸ್‌ನ ಅಂತಿಮ ಪಟ್ಟಿ ಬುಧವಾರ ಬಿಡುಗಡೆಯಾಗಲಿದೆ. ಮಂಗಳೂರು ಉತ್ತರ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂಬ ಪ್ರಶ್ನೆಗೆ ಈ ಸಂದರ್ಭದಲ್ಲಿ ಉತ್ತರ ದೊರೆಯಲಿದೆ.