ಸಲಿಂಗ ಕಾಮವನ್ನು ಅಪರಾಧಮುಕ್ತಗೊಳಿಸಿದ ಬಳಿಕ ಅದು ಹೆಚ್ಚಿನ ಸ್ವೀಕೃತಿಯನ್ನು ಪಡೆದುಕೊಂಡಿದೆ: ಸಿಜೆಐ

ಹೊಸದಿಲ್ಲಿ,ಎ.18: ಸರ್ವೋಚ್ಚ ನ್ಯಾಯಾಲಯವು 2018ರಲ್ಲಿ ಸಲಿಂಗ ಕಾಮವನ್ನು ಅಪರಾಧಮುಕ್ತಗೊಳಿಸಿದ ಬಳಿಕ ಅದು ಭಾರತೀಯ ಸಮಾಜದಲ್ಲಿ ಹೆಚ್ಚಿನ ಸ್ವೀಕೃತಿಯನ್ನು ಪಡೆದುಕೊಂಡಿದೆ ಎಂದು ಭಾರತದ ಮುಖ್ಯ ನ್ಯಾಯಾಧೀಶ ಡಿ.ವೈ.ಚಂದ್ರಚೂಡ್ ಅವರು ಮಂಗಳವಾರ ಹೇಳಿದರು.
ನ್ಯಾ.ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಸಲಿಂಗ ವಿವಾಹಗಳಿಗೆ ಮಾನ್ಯತೆಯನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿದೆ.
‘2018ರ ತೀರ್ಪು ಮತ್ತು ಇಂದಿನ ನಡುವೆ ನಮ್ಮ ಸಮಾಜವು ಸಲಿಂಗಿ ದಂಪತಿಗಳಿಗೆ ಹೆಚ್ಚಿನ ಸ್ವೀಕೃತಿಯನ್ನು ಕಂಡಿದೆ. ಇದು ತುಂಬ ಧನಾತ್ಮಕವಾಗಿದೆ ’ಎಂದು ಸಿಜೆಐ ಮಂಗಳವಾರ ವಿಚಾರಣೆ ಸಂದರ್ಭ ಹೇಳಿದರು.
ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆಯನ್ನು ಕೋರಿರುವ ಅರ್ಜಿದಾರರು,ಪುರುಷ ಮತ್ತು ಮಹಿಳೆ ಮಾತ್ರ ಮದುವೆಯಾಗಲು ಅವಕಾಶ ನೀಡಿರುವ ಈ ನಿಬಂಧನೆಗಳು ಎಲ್ಜಿಬಿಟಿಕ್ಯೂಐಎ+ ಸಮುದಾಯದ ವಿರುದ್ಧ ತಾರತಮ್ಯದ್ದಾಗಿವೆ ಮತ್ತು ಘನತೆ ಹಾಗೂ ಖಾಸಗಿತನದ ಅವರ ಮೂಲಭೂತ ಹಕ್ಕನ್ನು ಉಲ್ಲಂಘಿಸಿವೆ ಎಂದು ವಾದಿಸಿದ್ದಾರೆ.
ಸಂಗಾತಿಗಳಾಗಿ ಸಹಜೀವನ ಮತ್ತು ಸಲಿಂಗ ವ್ಯಕ್ತಿಗಳು ಲೈಂಗಿಕ ಸಂಬಂಧ ಹೊಂದಿರುವುದನ್ನು ಜೈವಿಕ ಪುರುಷ ಮತ್ತು ಜೈವಿಕ ಮಹಿಳೆಯನ್ನು ಒಳಗೊಂಡಿರುವ ಭಾರತೀಯ ಕುಟುಂಬ ಘಟಕದ ಪರಿಕಲ್ಪನೆಗೆ ಹೋಲಿಸಲಾಗದು ಎಂದು ಅರ್ಜಿಗಳನ್ನು ವಿರೋಧಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅಫಿಡವಿಟ್ನಲ್ಲಿ ಕೇಂದ್ರ ಸರಕಾರವು ವಾದಿಸಿದೆ. ಸರಕಾರದ ನಿಲುವು,ವಿರುದ್ಧ ಲಿಂಗಗಳ ನಡುವೆ ಮಾತ್ರ ವಿವಾಹಕ್ಕೆ ಅವಕಾಶ ನೀಡಬೇಕು ಎಂದು ಪ್ರತಿಪಾದಿಸಿರುವ ಆರೆಸ್ಸೆಸ್ ಮತ್ತು ಜಮೀಯತ್ ಉಲಮಾ-ಇ-ಹಿಂದ್ ನಿಲುವುಗಳಿಗೆ ಅನುಗುಣವಾಗಿದೆ.
ಮಂಗಳವಾರದ ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲ ಮುಕುಲ್ ರೋಹಟ್ಗಿ ಅವರು,ಸಲಿಂಗ ಸಂಬಂಧಗಳಲ್ಲಿರುವವರು ಭಿನ್ನಲಿಂಗೀಯರಂತೆ ಸಮಾನ ಹಕ್ಕುಗಳನ್ನು ಹೊಂದಿರಬೇಕು ಎಂದು ವಾದಿಸಿದರು. ವಿವಾಹವು ಕೇವಲ ಘನತೆಯ ಕುರಿತು ಮಾತ್ರವಲ್ಲ,ಅದರೊಂದಿಗೆ ಹಕ್ಕುಗಳ ಗುಚ್ಛವೂ ಬರುತ್ತದೆ ಎಂದು ವಾದಿಸಿದ ಅರ್ಜಿದಾರರ ಪರ ಇನ್ನೋರ್ವ ನ್ಯಾಯವಾದಿ ಮೇನಕಾ ಗುರುಸ್ವಾಮಿಯವರು,ಸಲಿಂಗಿ ಸಂಗಾತಿಗಳಿಗೆ ಬ್ಯಾಂಕ್ ಖಾತೆಗಳು,ಜೀವವಿಮೆ ಮತ್ತು ಆರೋಗ್ಯ ವಿಮೆ ಇತ್ಯಾದಿಗಳನ್ನು ನಿರಾಕರಿಸಲಾಗುತ್ತಿದೆ ಎಂದು ಬೆಟ್ಟು ಮಾಡಿದರು.
ಈ ನಡುವೆ ನ್ಯಾ.ಚಂದ್ರಚೂಡ್ ಅವರು,ಅಂತರ್ಧರ್ಮೀಯ ಮದುವೆಯಾಗುವವರು 30 ದಿನಗಳ ಲಿಖಿತ ನೋಟಿಸ್ ನೀಡಬೇಕೆಂಬ 1954ರ ವಿಶೇಷ ವಿವಾಹ ಕಾಯ್ದೆಯಲ್ಲಿನ ಷರತ್ತು ಅಸಾಂವಿಧಾನಿಕವಾಗಿದೆ ಎಂದು ವೌಖಿಕವಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.







