ಸುಡಾನ್ ನಲ್ಲಿ ವೈದ್ಯಕೀಯ ನೆರವು ಪೂರೈಕೆ ಸಾಧ್ಯವಾಗುತ್ತಿಲ್ಲ: ಐಎಫ್‌ಆರ್‌ಸಿ ಆತಂಕ

ಜಿನೇವಾ,ಎ.18: ಸೇನಾಪಡೆಗಳು ಹಾಗೂ ಅರೆಸೈನಿಕ ಪಡೆಗಳ ನಡುವೆ ಭೀಕರ ಕದನ ನಡೆಯುತ್ತಿರುವ ರಾಜಧಾನಿ ಖಾರ್ತೊಮ್ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಜನಸಾಮಾನ್ಯರಿಗೆ ಮಾನವೀಯ ನೆರವುಗಳನ್ನು ಒದಗಿಸುವುದು ಕಷ್ಟಕರವಾಗಿದ್ದು, ದೇಶದ ಆರೋಗ್ಯ ವ್ಯವಸ್ಥೆ ಪತನದ ಅಪಾಯದಲ್ಲಿದೆ ಎಂದು ಅಂತಾರಾಷ್ಟ್ರೀಯ ರೆಡ್ಕ್ರಾಸ್ ಹಾಗೂ ರೆಡ್ ಕ್ರಿಸೆಂಟ್ ಸೊಸೈಟಿಗಳ ಒಕ್ಕೂಟ (ಐಎಫ್‌ಆರ್‌ಸಿ ) ಮಂಗಳವಾರ ಆತಂಕ ವ್ಯಕ್ತಡಿಸಿವೆ.
ನಾಗರಿಕರನ್ನು ಸಂಘರ್ಷ ಪೀಡಿತ ಸ್ಥಳಗಳಿಂದ ತೆರವುಗೊಳಿಸುವಂತೆ ವಿವಿಧ ಸಂಘಟನೆಗಳು ಹಾಗೂ ವ್ಯಕ್ತಿಗಳಿಂದ ತಮ್ಮ ಸಂಘಟನೆಗೆ ಕರೆಗಳು ಬರುತ್ತಿವೆಯೆಂದು ಐಎಫ್‌ಆರ್‌ಸಿ ವರಿಷ್ಠ ಫಾಯೀದ್ ಐವ್ವರ್ ತಿಳಿಸಿದ್ದಾರೆ.ಸೂಡಾನ್ ಸಂಘರ್ಷದಲ್ಲಿ ಮೂರು ಆರೋಗ್ಯ ಪಾಲನಾ ಕೇಂದ್ರಗಳ ಮೇಲೆ ದಾಳಿ ನಡೆದಿದ್ದು, ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಆರೋಗ್ಯಪಾಲನಾ ವ್ಯವಸ್ಥೆಯ ಮೇಲೆ ದಾಳಿ ನಡೆಸುವುದು ಮಾನವತಾ ಕಾನೂನು ಹಾಗೂ ಆರೋಗ್ಯದ ಹಕ್ಕುಗಳ ಘೋರ ಉಲ್ಲಂಘನೆಯಾಗಿದ್ದು, ಇದು ಈಗಲೇ ಕೊನೆಗೊಳ್ಳೇಕಾಗಿದೆ ಎಂದು ವಿಶ್ವಸಂಸ್ಥೆ ವಕ್ತಾರೆ ಮಾರ್ಗರೆಟ್ ಹ್ಯಾರಿಸ್ ತಿಳಿಸಿದ್ದಾರೆ.