2018ರಿಂದಲೂ ಬಳಕೆಯಲ್ಲಿರುವ 6.5 ಲಕ್ಷಕ್ಕೂ ಅಧಿಕ ದೋಷಯುಕ್ತ ವಿವಿಪ್ಯಾಟ್ ಯಂತ್ರಗಳ ಬಗ್ಗೆ ಗಾಢಮೌನ
Thewire.in ವರದಿ

ಹೊಸದಿಲ್ಲಿ,ಎ.18: 6.5 ಲಕ್ಷಕ್ಕೂ ಅಧಿಕ ವಿವಿಪ್ಯಾಟ್ ಯಂತ್ರಗಳು ದೋಷಯುಕ್ತವಾಗಿವೆ ಎಂದು ಚುನಾವಣಾ ಆಯೋಗವು ಬೆಟ್ಟು ಮಾಡಿದೆಯೆಂಬ ಮಾಹಿತಿ ತನಗೆ ಲಭ್ಯವಾಗಿರುವುದಾಗಿ ಸುದ್ದಿ ಜಾಲತಾಣ ‘ದಿ ವೈರ್’ ವರದಿಯಲ್ಲಿ ಉಲ್ಲೇಖಿಸಿದೆ.
ಈ ಯಂತ್ರಗಳನ್ನು ಈಗ ದುರಸ್ತಿಗಾಗಿ ತಯಾರಕರಿಗೆ ಮರಳಿಸಲಾಗುತ್ತಿದೆ. ಇವು 2018ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿದ್ದ ಎಂ3 ಪೀಳಿಗೆಯ ನವೀನ ಯಂತ್ರಗಳಾಗಿವೆ ಎನ್ನುವುದನ್ನು ಇಲ್ಲಿ ಗಮನಿಸಬೇಕು. 2019ರ ಲೋಕಸಭಾ ಚುನಾವಣೆಗಳಲ್ಲಿ ಮತ್ತು ನಂತರ ನಡೆದ ವಿಧಾನಸಭಾ ಚುನಾವಣೆಗಳಿಗಾಗಿ ಒಟ್ಟು 17.4 ಲ.ವಿವಿಪ್ಯಾಟ್ ಯಂತ್ರಗಳ ಬಳಕೆಯನ್ನು ಸೂಚಿಸಲಾಗಿತ್ತು. ಅಂದರೆ ಈ ಪೈಕಿ ಶೇ.37ರಷ್ಟು ಯಂತ್ರಗಳು ದೋಷಯುಕ್ತವಾಗಿವೆ ಎನ್ನುವುದನ್ನು ಈಗ ಆಯೋಗವು ಕಂಡುಕೊಂಡಿದೆ ಎಂದು ವರದಿಯು ಬೆಟ್ಟು ಮಾಡಿದೆ.
ವಿವಿಪ್ಯಾಟ್ ಗಳ ಇಡೀ ಸರಣಿಯನ್ನು ಬದಲಿಸಲಾಗುತ್ತಿದೆ ಎನ್ನುವುದು ಇನ್ನಷ್ಟು ಹೆಚ್ಚು ಅಚ್ಚರಿಯ ವಿಷಯವಾಗಿದೆ. ದೋಷಯುಕ್ತ ಯಂತ್ರಗಳನ್ನು ದುರಸ್ತಿಗಾಗಿ ಅವುಗಳ ತಯಾರಕರಾದ ಹೈದರಾಬಾದ್ನ ಇಸಿಐಎಲ್ ಮತ್ತು ಪಂಚಕುಲಾದ ಬಿಇಎಲ್ ಗೆ ರವಾನಿಸಲಾಗಿದೆ ಎಂದು ವರದಿಯು ತಿಳಿಸಿದೆ.
ಈ ಸರಣಿಗಳ ವಿವಿಪ್ಯಾಟ್ ಯಂತ್ರಗಳನ್ನು 2018ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿತ್ತು ಮತ್ತು ಆಗಿನಿಂದ ನಡೆದ ಎಲ್ಲ ಚುನಾವಣೆಗಳಲ್ಲಿ ಬಳಸಲಾಗಿತ್ತು. ದೋಷಯುಕ್ತ ಯಂತ್ರಗಳನ್ನು ದೇಶಾದ್ಯಂತದಿಂದ ಸಂಗ್ರಹಿಸಲಾಗಿದೆ ಮತ್ತು ಹೊಸ ಬದಲಿ ಯಂತ್ರಗಳು ಈಗ ಹೆಚ್ಚುಕಡಿಮೆ ಎಲ್ಲ ಜಿಲ್ಲೆಗಳಿಗೆ ತಲುಪಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಯು ಹೇಳಿದೆ.
ಪಾರದರ್ಶಕತೆ ಇಂದಿನ ಅಗತ್ಯ:ತಜ್ಞರು
ಹೆಚ್ಚಿನ ಸಂಖ್ಯೆಯಲ್ಲಿ, ಅದೂ ಸರಣಿಗಳಲ್ಲಿ ದೋಷಪೂರಿತ ಯಂತ್ರಗಳ ಬಗ್ಗೆ ತಜ್ಞರು ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿದ್ದಾರೆ. ಸಾಮಾನ್ಯವಾಗಿ ಚುನಾವಣೆಯೊಂದರಲ್ಲಿ ಸುಮಾರು 4,000 ಇವಿಎಂಗಳು ದೋಷಯುಕ್ತವಾಗಿರುತ್ತವೆ. ಇದಕ್ಕೆ ಅನುಗುಣವಾಗಿ ಎಲೆಕ್ಟ್ರೋ ಮೆಕ್ಯಾನಿಕಲ್ ಸಾಧನಗಳಾಗಿರುವ ಮತ್ತು ಹೆಚ್ಚಿನ ಹಾನಿಯ ಅಪಾಯವನ್ನು ಹೊಂದಿರುವ ವಿವಿಪ್ಯಾಟ್ ಗಳ ಸಂಖ್ಯೆ ಇದಕ್ಕಿಂತ ಗರಿಷ್ಠ 10 ಪಟ್ಟು ಇರಬಹುದು. ಆದರೆ 6.5 ಲ.ಕ್ಕೂ ಅಧಿಕ ವಿವಿಪ್ಯಾಟ್ ಯಂತ್ರಗಳು ದೋಷಯುಕ್ತವಾಗಿವೆ ಎಂದು ನೀವು ಹೇಳುತ್ತಿರುವುದು ನಿಜವಾಗಿದ್ದರೆ ಅದು ಅತ್ಯಂತ ಗಂಭೀರ ವಿಷಯವಾಗಿದೆ ಎಂದು ಮಾಜಿ ಮುಖ್ಯ ಚುನಾವಣಾ ಆಯೋಕ್ತ ಎಸ್.ವೈ.ಖುರೇಷಿ ಹೇಳಿದರು.
ಇವಿಎಂಗಳು ಮತ್ತು ವಿವಿಪ್ಯಾಟ್ ಗಳ ಸದೃಢತೆ ಮತ್ತು ದಕ್ಷತೆಯನ್ನು ತಯಾರಕರು ಮತ್ತು ಚುನಾವಣಾ ಆಯೋಗ ಸಮರ್ಥಿಸಿಕೊಂಡಿವೆ. ತಾತ್ವಿಕವಾಗಿ ಈ ಯಂತ್ರಗಳನ್ನು ಪರೀಕ್ಷಿಸಲು ವಿವಿಧ ತಜ್ಞರಿಗೆ ಒಪ್ಪಿಸಬೇಕು. ಪಾರದರ್ಶಕತೆಯ ಕೊರತೆ ಮತ್ತು ಗೋಪ್ಯತೆಯ ಮುಸುಕು ಸಮಸ್ಯೆಯಾಗಿದೆ ಎಂದು ಐಐಟಿ-ಕಾನ್ಪುರದ ಕಂಪ್ಯೂಟರ್ ವಿಜ್ಞಾನ ಪ್ರೊಫೆಸರ್ ಸಂದೀಪ್ ಶುಕ್ಲಾ ಹೇಳಿದರು.







