ಉನ್ನಾವೊ ಸಾಮೂಹಿಕ ಅತ್ಯಾಚಾರ ಪ್ರಕರಣ: ಸಂತ್ರಸ್ತೆ ದಲಿತ ಬಾಲಕಿಯ ಗುಡಿಸಲಿಗೆ ಬೆಂಕಿ ಹಚ್ಚಿದ ಆರೋಪಿಗಳು
ಇಬ್ಬರು ಮಕ್ಕಳಿಗೆ ಗಾಯ

ಲಕ್ನೋ (ಉತ್ತರಪ್ರದೇಶ), ಎ. 18: ಉನ್ನಾವೊ ಸಾಮೂಹಿಕ ಅತ್ಯಾಚಾರ ಪ್ರಕರಣದ ಇಬ್ಬರು ಆರೋಪಿಗಳು ಇತರ ಐದು ಮಂದಿಯನ್ನು ಸೇರಿಸಿಕೊಂಡು ಅತ್ಯಾಚಾರ ಸಂತ್ರಸ್ತೆ ದಲಿತ ಬಾಲಕಿಯ ಗುಡಿಸಲಿಗೆ ಬೆಂಕಿ ಹಚ್ಚಿದ ಘಟನೆ ಸೋಮವಾರ ಸಂಜೆ ನಡೆದಿದೆ.
ಘಟನೆಯಲ್ಲಿ ಅತ್ಯಾಚಾರಕ್ಕೊಳಗಾದ ದಲಿತ ಬಾಲಕಿಗೆ ಜನಿಸಿದ 6 ತಿಂಗಳ ಶಿಶು ಹಾಗೂ ಆಕೆಯ 2 ತಿಂಗಳ ಸಹೋದರಿ ಗಾಯಗೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡ ಮಕ್ಕಳನ್ನು ಕಾನ್ಪುರದಲ್ಲಿರುವ ಹಾಲ್ಲೆಟ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬಾಲಕಿ ಹಾಗೂ ಆಕೆಯ ತಾಯಿ ಉನ್ನಾವೊದಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಲಕಿಯ ಪುತ್ರನಿಗೆ ಶೇ. 35 ಹಾಗೂ ಸಹೋದರಿಗೆ ಶೇ. 45 ಸುಟ್ಟ ಗಾಯಗಳಾಗಿವೆ ಎಂದು ಮುಖ್ಯ ವೈದ್ಯಾಧಿಕಾರಿ ಸುಶೀಲ್ ಶ್ರೀವಾತ್ಸವ ತಿಳಿಸಿದ್ದಾರೆ.
ಉನ್ನಾವೊ ಸಾಮೂಹಿಕ ಅತ್ಯಾಚಾರ ಪ್ರಕರಣದ ಇಬ್ಬರು ಆರೋಪಿಗಳಾದ ಅಮನ್ ಹಾಗೂ ಸತೀಶ್ ಇತ್ತೀಚೆಗೆ ಕಾರಾಗಾೃಹದಿಂದ ಬಿಡುಗಡೆಯಾಗಿದ್ದರು. ಬಾಲಕಿ ಪ್ರಕರಣ ಹಿಂಪಡೆಯಲು ನಿರಾಕರಿಸಿದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳು ಇತರ ಐವರನ್ನು ಸೇರಿಸಿಕೊಂಡು ಬಾಲಕಿಯ ಗುಡಿಸಿಲಿಗೆ ಬೆಂಕಿ ಹಚ್ಚಿದ್ದಾರೆ.
‘‘ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳು ಸೋಮವಾರ ರಾತ್ರಿ ತಮ್ಮ ಮನೆಗೆ ಬಂದರು. ಪ್ರಕರಣ ಹಿಂಪಡೆಯುವಂತೆ ಬಲವಂತಪಡಿಸಿದರು. ನಾವು ವಿರೋಧಿಸಿದೆವು. ಇದಕ್ಕೆ ಅವರು ಹಾಗೂ ಅವರೊಂದಿಗೆ ಇದ್ದ ಇತರರು ನಮಗೆ ದೊಣ್ಣೆಯಿಂದ ಥಳಿಸಿದರು. ಅನಂತರ ಗುಡಿಸಲಿಗೆ ಬೆಂಕಿ ಹಚ್ಚಿದರು. ಅವರು ಇಬ್ಬರು ಮಕ್ಕಳನ್ನು ಜೀವಂತ ದಹಿಸಲು ಪ್ರಯತ್ನಿಸಿದರು ಎಂದು ಅತ್ಯಾಚಾರ ಸಂತ್ರಸ್ತೆ ಹಾಗೂ ಆಕೆಯ ತಾಯಿ ಆರೋಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ 7 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2022 ಫೆಬ್ರವರಿ 13ರಂದು ಉನ್ನಾವೊ ಗ್ರಾಮದಲ್ಲಿ ಐವರು ಯುವಕರು ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಅದೇ ವರ್ಷ ಸೆಪ್ಟಂಬರ್‌ನಲ್ಲಿ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಪ್ರಕರಣದಲ್ಲಿ ಅಮನ್, ಅರುಣ್ ಹಾಗೂ ಸತೀಶ್‌ಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿತ್ತು.







