ಮನೆಗೆ ಹೋಗುತ್ತಿದ್ದ ಶಾಲಾ ಬಾಲಕಿಯ ಅತ್ಯಾಚಾರ, ಕೊಲೆ

ಗ್ಯಾಂಗ್ಟಕ್: ಶಾಲೆಯಿಂದ ಮನೆಗೆ ತೆರಳುತ್ತಿದ್ದ ಬಾಲಕಿಯ ಮೇಲೆ 29 ವರ್ಷ ವಯಸ್ಸಿನ ಕಾರು ಚಾಲಕನೊಬ್ಬ ಅತ್ಯಾಚಾರ ಎಸಗಿ ಬಳಿಕ ಬಾಲಕಿಯನ್ನು ಹತ್ಯೆ ಮಾಡಿರುವ ಅಮಾನಷ ಘಟನೆ ಸಿಕ್ಕಿಂ ರಾಜಧಾನಿಯಲ್ಲಿ ನಡೆದಿದೆ. ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಬಾಲಕಿ ನಾಪತ್ತೆಯಾಗಿ ಮೂರು ದಿನಗಳ ಬಳಿಕ ಪೊಲೀಸರು ಮೃತದೇಹವನ್ನ ಪತ್ತೆ ಮಾಡಿದ್ದಾರೆ. ಶಾಲೆಯಿಂದ ಮನೆಗೆ ಬಾಲಕಿ ನಡೆದುಕೊಂಡು ಹೋಗುತ್ತಿದ್ದಾಗ, ಕಾರಿನಲ್ಲಿ ಕರೆದೊಯ್ಯುವುದಾಗಿ ಚಾಲಕ ಬಾಕಿಯನ್ನು ಕಾರಿಗೆ ಕರೆದ ಎನ್ನಲಾಗಿದೆ.
ಬಳಿಕ ಪೆಟ್ರೋಲ್ ಬಂಕ್‌ನಲ್ಲಿ ಕಾರು ನಿಲ್ಲಿಸಿ ಆಕೆಗೆ ತಿಂಡಿ ತಿನಸು ಮತ್ತು ಜ್ಯೂಸ್ ಕೊಡಿಸಿದ. ನಂತರ ಪಕ್ಕದ ಅರಣ್ಯಕ್ಕೆ ಕರೆದೊಯ್ದು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಎಂದು ಆಪಾದಿಸಲಾಗಿದೆ.
ಆರೋಪಿ ವಿರುದ್ಧ ಭಾರತೀಯ ದಂಡಸಂಹಿತೆ ಮತ್ತು ಪೋಕ್ಸೋ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಸಂತ್ರಸ್ತ ಬಾಲಕಿಯ ತಾಯಿ ಆಗ್ರಹಿಸಿದ್ದಾರೆ.
"ನನ್ನ ಮಗಳು ಜೀವ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟಿದ್ದಾಳೆ. ಆಕೆ ಸಾಯುವ ಮುನ್ನ ಆಕೆಗೆ ಚಿತ್ರಹಿಂಸೆ ನೀಡಲಾಗಿದೆ. ಅದೇ ಶಿಕ್ಷೆಯನ್ನು ಆರೋಪಿಗೂ ನೀಡಬೇಕು. ನಮ್ಮ ಕೈಗೆ ಆರೋಪಿ ಸಿಕ್ಕಿದಲ್ಲಿ ಅದೇ ರೀತಿ ಆತನಿಗೂ ಚಿತ್ರಹಿಂಸೆ ನೀಡುತ್ತೇವೆ" ಎಂದು ಹೇಳಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.







