ಮತ್ತೆ ಬಿಜೆಪಿ ಸೇರಲು ಉತ್ಸುಕರಾಗಿರುವ ಟಿಎಂಸಿ ನಾಯಕ ಮುಕುಲ್ ರಾಯ್

ಕೋಲ್ಕತ್ತಾ: ತಾನು ಈಗಲೂ ಬಿಜೆಪಿ ಶಾಸಕನಾಗಿದ್ದು, ಆ ಪಕ್ಷಕ್ಕೆ ಮರಳಲು ಉತ್ಸುಕರಾಗಿರುವ ಕಾರಣ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಬಯಸುವುದಾಗಿ ಹಿರಿಯ ಟಿಎಂಸಿ ನಾಯಕ ಮುಕುಲ್ ರಾಯ್ ಅವರು ಮಂಗಳವಾರ ರಾತ್ರಿ ಹೇಳಿದ್ದಾರೆ.
ಸೋಮವಾರ ರಾತ್ರಿ "ಕೆಲವು ವೈಯಕ್ತಿಕ ಕೆಲಸಕ್ಕಾಗಿ"ದಿಲ್ಲಿಗೆ ಪ್ರಯಾಣ ಬೆಳೆಸಿರುವ ರಾಯ್ ಅವರು "ಕಾಣೆಯಾಗಿದ್ದಾರೆ" ಎಂದು ಅವರ ಕುಟುಂಬವು ಆರಂಭದಲ್ಲಿ ಹೇಳಿಕೊಂಡಿದ್ದರೂ ಅಸ್ವಸ್ಥರಾಗಿರುವ ಟಿಎಂಸಿ ನಾಯಕನನ್ನು ಬಳಸಿಕೊಂಡು ಬಿಜೆಪಿ ಕೊಳಕು ರಾಜಕೀಯದಲ್ಲಿ ತೊಡಗಿದೆ ಎಂದು ಆರೋಪಿಸಿತು. ರಾಯ್ ಅವರ ಮನಸ್ಥಿತಿ ಕೂಡ ಸರಿಯಿಲ್ಲ ಎಂದು ಹೇಳಿದೆ.
"ನಾನು ಬಿಜೆಪಿ ಶಾಸಕ. ನಾನು ಬಿಜೆಪಿಯೊಂದಿಗೆ ಇರಲು ಬಯಸುತ್ತೇನೆ. ನಾನು ಇಲ್ಲಿ ಉಳಿಯಲು ಪಕ್ಷವು ವ್ಯವಸ್ಥೆ ಮಾಡಿದೆ. ನಾನು ಅಮಿತ್ ಶಾ ಅವರನ್ನು ಭೇಟಿ ಮಾಡಲು ಹಾಗೂ (ಪಕ್ಷದ ಅಧ್ಯಕ್ಷ) ಜೆ.ಪಿ. ನಡ್ಡಾ ಅವರೊಂದಿಗೆ ಮಾತನಾಡಲು ಬಯಸುತ್ತೇನೆ" ಎಂದು ರಾಯ್ ಅವರು ಬಂಗಾಳಿ ಸುದ್ದಿ ವಾಹಿನಿಗೆ ತಿಳಿಸಿದರು.
ಟಿಎಂಸಿಯ ಸ್ಥಾಪಕ ಸದಸ್ಯರಾಗಿರುವ ರಾಯ್ 2017 ರಲ್ಲಿ ಬಿಜೆಪಿಗೆ ಸೇರಿದ್ದರು. ಅವರು 2022 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದರು. ಆದಾಗ್ಯೂ ಅವರು ಸದನಕ್ಕೆ ರಾಜೀನಾಮೆ ನೀಡದೆ ತೃಣಮೂಲ ಕಾಂಗ್ರೆಸ್‌ಗೆ ಮರಳಿದ್ದರು.
''ಕೆಲವು ದಿನಗಳಿಂದ ನನಗೆ ಆರೋಗ್ಯ ಸರಿಯಿಲ್ಲದ ಕಾರಣ ರಾಜಕೀಯದಿಂದ ದೂರವಿದ್ದೆ. ಆದರೆ ಇದೀಗ ನಾನು ಚೆನ್ನಾಗಿದ್ದೇನೆ ಹಾಗೂ ಮತ್ತೆ ರಾಜಕೀಯದಲ್ಲಿ ಸಕ್ರಿಯನಾಗುತ್ತೇನೆ. ಟಿಎಂಸಿಯೊಂದಿಗೆ ಎಂದಿಗೂ ನಂಟು ಹೊಂದುವುದಿಲ್ಲ ಎಂದು 100 ಪ್ರತಿಶತದಷ್ಟು ವಿಶ್ವಾಸ ಹೊಂದಿದ್ದೇನೆ’’ ಎಂದು ರಾಯ್ ಹೇಳಿದರು.







