ಡೇರಿ ವಿಚಾರದಲ್ಲಿ ಗ್ಯಾಟ್ ಬೆಳವಣಿಗೆಗಳು ಮತ್ತು ಆ ಪ್ರಕ್ರಿಯೆಯಲ್ಲಿ ಸಹಕಾರಿ ಡೇರಿ ಉದ್ದಿಮೆ

►► ಸರಣಿ - 06
ಭಾರತ ಏನೇ ತಿಪ್ಪರಲಾಗ ಹಾಕಿದರೂ ನಿರೀಕ್ಷಿತ ಮಟ್ಟದಲ್ಲಿ ಡೇರಿ ಉತ್ಪನ್ನಗಳನ್ನು ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ಅತಿಹೆಚ್ಚು ಹಾಲು ಉತ್ಪಾದಿಸುವ ದೇಶ ಅತಿ ಕಡಿಮೆ ರಫ್ತು ಮಾಡುತ್ತಿದೆ ಎನ್ನುವುದು ಅಂತರ್‌ರಾಷ್ಟ್ರೀಯ ಮಾರುಕಟ್ಟೆ ದೃಷ್ಟಿಯಿಂದ ಶೋಚನೀಯ. ಹೀಗಿರುವಲ್ಲಿ ತನ್ನೊಳಗಿನ ‘ಅಧಿಕ’ ಉತ್ಪನ್ನದ ಪ್ರಮಾಣವನ್ನು ಹೇಗೆ ನಿಭಾಯಿಸಬೇಕು? ಇದು ನಮ್ಮ ಡೇರಿ ವಲಯ ಇಂದು ಅನುಭವಿಸುತ್ತಿರುವ ವಾಸ್ತವ ಸ್ಥಿತಿ.
ಎರಡನೇ ಮಹಾಯುದ್ಧದ ನಂತರ ಅಂತರ್‌ರಾಷ್ಟ್ರೀಯ ವ್ಯಾಪಾರ, ವಹಿವಾಟಿನಲ್ಲಿ ಸಮನ್ವಯ ಸಾಧಿಸುವ ಉದ್ದೇಶದಿಂದ ಹಲವು ರಾಷ್ಟ್ರಗಳು ಒಗ್ಗೂಡಿ ೧೯೪೭ರಿಂದ ಆರಂಭಿಸಿದ General Agreement on Tariffsand Trade (GATT) ಮಾತುಕತೆಗಳಲ್ಲಿ ಕೃಷಿ ಕ್ಷೇತ್ರವನ್ನು ಬಹುತೇಕ ಹೊರಗಿಟ್ಟಿತ್ತು. ಹಲವಾರು ದೇಶಗಳ, ಅದರಲ್ಲೂ ಅಭಿವೃದ್ಧಿಶೀಲ ದೇಶಗಳ ಆಹಾರ ಭದ್ರತೆಯ ದೃಷ್ಟಿಯಿಂದ ಕೃಷಿ ಮತ್ತು ಡೇರಿ ಉತ್ಪನ್ನಗಳನ್ನು ಮುಕ್ತ ವ್ಯಾಪಾರ ಪಟ್ಟಿಯಲ್ಲಿ ಸೇರಿಸಿರಲಿಲ್ಲ. ೧೯೭೩-೭೬ರ ಟೋಕಿಯೊ ಮಾತುಕತೆಗಳಲ್ಲಿ ‘ಅಂತರ್‌ರಾಷ್ಟ್ರೀಯ ಡೇರಿ ಅರೇಂಜ್‌ಮೆಂಟ್’ ಎನ್ನುವ ಒಂದು ಒಪ್ಪಂದ ಹಲವು ದೇಶಗಳ ನಡುವೆ ಆಗಿತ್ತಾದರೂ, ಅದು ಆದದ್ದು ಇಚ್ಛೆಪಟ್ಟ ದೇಶಗಳ ನಡುವೆ ಮಾತ್ರ. ಆ ಹೊತ್ತಿಗೆ ಭಾರತ ಇನ್ನೂ ಡೇರಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿರಲಿಲ್ಲ. ಹಾಗಾಗಿ ಅದು ಆ ಅರೇಂಜ್‌ಮೆಂಟ್‌ನ ಭಾಗವಾಗಿರಲಿಲ್ಲ. ಆದರೆ ೧೯೮೬-೯೩ರ ಅವಧಿಯಲ್ಲಿ ನಡೆದ ಉರುಗ್ವೆ ಸುತ್ತಿನ ಗ್ಯಾಟ್ ಮಾತುಕತೆಗಳಲ್ಲಿ ಕೃಷಿ ಮತ್ತು ಡೇರಿ ವಲಯದ ಹಲವು ಉತ್ಪನ್ನಗಳನ್ನು ಮುಕ್ತ ವ್ಯಾಪಾರದಡಿ ತರುವ ಮಾತುಕತೆಗಳು ಆರಂಭವಾದವು. ಅವು ಎಲ್ಲ ದೇಶಗಳಿಗೂ ಅನ್ವಯಿಸುವಂತಿದ್ದವು. ಆಗ ಭಾರತದ ವಾಣಿಜ್ಯ ಕಾರ್ಯದರ್ಶಿಯಾಗಿ ಮಾತುಕತೆಗಳಲ್ಲಿ ಪಾಲ್ಗೊಂಡಿದ್ದ ಎಸ್‌ಪಿ ಶುಕ್ಲಾ ಅದನ್ನು ಪ್ರಖರವಾಗಿ ವಿರೋಧಿಸಿದರು. ಅಲ್ಲಿ ಭಾಗವಹಿಸಿದ್ದ ತೃತೀಯ ರಾಷ್ಟ್ರಗಳನ್ನು ಭಾರತದೊಂದಿಗೆ ಸೇರಿಸಿಕೊಂಡು ಮಾತುಕತೆಗಳಲ್ಲಿ ದೊಡ್ಡ ವಿರೋಧವನ್ನೇ ಹುಟ್ಟುಹಾಕಿದ್ದರು.
ಪ್ರೊ. ನಂಜುಂಡಸ್ವಾಮಿಯವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ದೇಶದ ಅನೇಕ ರೈತ ಸಂಘಟನೆಗಳನ್ನು ಸಂಘಟಿಸಿ ‘ಕೃಷಿ ಕ್ಷೇತ್ರವನ್ನು ಗ್ಯಾಟ್ ಒಪ್ಪಂದದಿಂದ ಹೊರಗಿಡಿ’ ಎಂದು ಹೋರಾಟ ಆರಂಭಿಸಿತು. ನಿಮಗೆ ನೆನಪಿರಬಹುದು, ೧೯೯೨ರಲ್ಲಿ ದೇಶದ ವಿವಿಧ ರೈತ ಸಂಘಟನೆಗಳು ದಿಲ್ಲಿಯ ಬೋಟ್ ಕ್ಲಬ್‌ನಲ್ಲಿ ದೊಡ್ಡ ಸಂಪು ಹೂಡಿದ್ದವು. ಆನಂತರ ಮಹೇಂದ್ರ ಸಿಂಗ್ ಟಿಕಾಯತ್, ಮೇಧಾ ಪಾಟ್ಕರ್, ವಂದನಾ ಶಿವ, ಮೊದಲಾದವರು ಅಲ್ಲದೆ ಏಶ್ಯದ ಹಲವು ರೈತ ಮುಖಂಡರು ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ಬೀಜ ಸಾರ್ವಭೌಮತ್ವಕ್ಕಾಗಿ ‘ಬೀಜ ಸತ್ಯಾಗ್ರಹ’ ಎನ್ನುವ ಬೃಹತ್ ರೈತ ಸಮಾವೇಶವನ್ನೂ ನಡೆಸಿದ್ದರು.
ಇವು ಒಟ್ಟಾರೆ ದೇಶದ ಕೃಷಿ ಕ್ಷೇತ್ರವನ್ನು ರಕ್ಷಿಸಿಕೊಳ್ಳುವ ಹೋರಾಟವಾಗಿದ್ದವೇ ಹೊರತು, ಆರ್‌ಸಿಇಪಿ ವಿರೋಧಿ ಹೋರಾಟ ಹೊರತುಪಡಿಸಿ ರೈತಸಂಘಟನೆಗಳು ಡೇರಿ ವಲಯಕ್ಕೆ ಸಂಬಂಧಿಸಿದಂತೆ ಹಮ್ಮಿಕೊಂಡ ಹೋರಾಟಗಳು ರಾಜ್ಯದಲ್ಲಿ, ದೇಶದಲ್ಲಿ ಕಡಿಮೆಯೇ. ಬಹುಶಃ ಸಹಕಾರಿ ಹಾಲು ಕ್ಷೇತ್ರವು ರೈತರಿಗೆ ಒಂದು ನಿಶ್ಚಿತ ಆದಾಯವನ್ನು ದೊರಕಿಸಿಕೊಡುತ್ತಿತ್ತು ಎನ್ನುವುದೂ ಇದಕ್ಕೆ ಕಾರಣವಿರಬಹುದು. ದೇಸೀ ಹಸು, ಎಮ್ಮೆ ತಳಿಗಳ ಅಭಿವೃದ್ಧಿಯ ಬಗೆಗಾಗಲೀ, ವಿದೇಶಿ ಎಚ್‌ಎಫ್ ತಳಿಗಳನ್ನು ಇಲ್ಲಿ ಪ್ರೋತ್ಸಾಹಿಸುವುದನ್ನು ವಿರೋಧಿಸಿಯಾಗಲೀ, ತಳಿಗಳ ಆಯ್ಕೆಯ ಬಗೆಗಾಗಲೀ ರೈತರಿಂದ (ಸಹಜ, ಸುಸ್ಥಿರ ಕೃಷಿಕರ ತಣ್ಣನೆಯ ಕೆಲವು ಹೋರಾಟಗಳನ್ನು ಹೊರತುಪಡಿಸಿ) ಯಾವ ಗುರುತರ ಹೋರಾಟಗಳೂ ನಡೆದಿಲ್ಲ. ವಿದೇಶಗಳು ಡೇರಿ ತಂತ್ರಜ್ಞಾನ ಮತ್ತು ತಳಿ ಸಂವರ್ಧನೆಯ ತಂತ್ರಜ್ಞಾನವನ್ನು ಭಾರತಕ್ಕೆ ರವಾನಿಸಿದಂತೆಯೇ, ಇಲ್ಲಿನ ಹಾಲು ಒಕ್ಕೂಟಗಳು ಅವನ್ನು ಸರಿಸುಮಾರು ಹಾಗೆಯೇ ಅನುಷ್ಠಾನ ಮಾಡಿದವು. ಇಂದಿಗೂ ದೇಶದ ಒಟ್ಟು ಹಾಲು ಉತ್ಪಾದನೆಯಲ್ಲಿ ಅರ್ಧದಷ್ಟು ಪಾಲನ್ನೂ, ಹಸುವಿಗಿಂತ ಒಳ್ಳೆಯ ಗುಣಮಟ್ಟವನ್ನೂ ನೀಡುತ್ತಿರುವ ಎಮ್ಮೆಗಳ ಕುರಿತಂತೆ ಸಹಕಾರಿಯೂ ಸೇರಿದಂತೆ ಎಲ್ಲ ಡೇರಿ ಉದ್ದಿಮೆಗಳೂ ಅವನ್ನು, ಅವುಗಳ ಸಾಮರ್ಥ್ಯಾಭಿವೃದ್ಧಿಯನ್ನು ಕಡೆಗಣಿಸಿವೆ. ಹೆಚ್ಚು ಇಳುವರಿ ಪಡೆಯುವುದು, ದೇಶದ ಒಟ್ಟಾರೆ ಹಾಲಿನ ಉತ್ಪತ್ತಿ ಮತ್ತು ಉತ್ಪನ್ನಗಳನ್ನು ಹೆಚ್ಚಿಸುವುದು, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತವೂ ಒಂದು ಸಮರ್ಥ ಡೇರಿ ವಲಯವಿರುವ ದೇಶ ಎನ್ನಿಸುಕೊಳ್ಳುವುದನ್ನಷ್ಟೇ ತಮ್ಮ ಗುರಿಯಾಗಿಸಿಕೊಂಡವು. ಅದನ್ನು ರೈತರೂ ಸಾರಾಸಗಟಾಗಿ ಒಪ್ಪಿಕೊಂಡು ನಿಶ್ಚಿತ ಆದಾಯವನ್ನಷ್ಟೇ ನೋಡಿದರೇ ವಿನಃ ದೂರಾಲೋಚನೆಗೆ ಅವಕಾಶ ನೀಡಲಿಲ್ಲ. ಇರಲಿ.
ಅಭಿವೃದ್ಧಿಶೀಲ ದೇಶಗಳ ರೈತರಿಂದ ದಾಖಲಾದ ಯಾವ ಪ್ರತಿಭಟನೆಗಳೂ ಫಲ ನೀಡದೆ, ಕೃಷಿ ಮತ್ತು ಡೇರಿ ಕ್ಷೇತ್ರವನ್ನು ಅಂತರ್‌ರಾಷ್ಟ್ರೀಯ ಮುಕ್ತ ಮಾರುಕಟ್ಟೆಗೆ ತರುವ ಪ್ರಸ್ತಾವ ಗ್ಯಾಟ್ ಮಾತುಕತೆಗಳಲ್ಲಿ ಉಳಿದುಕೊಂಡಿತು. ಭಾರತ ತನ್ನ ಅಂದಿನ ಆರ್ಥಿಕ ಸಂಕಷ್ಟದಿಂದ ಪಾರಾಗಬೇಕೆಂದರೆ ಗ್ಯಾಟ್ ಒಪ್ಪಂದಕ್ಕೆ ಸಹಿ ಹಾಕುವುದು ಅನಿವಾರ್ಯ ಎಂದಾಗಿ ೧೯೯೫ ರಲ್ಲಿ ಅದು ಸಹಿ ಹಾಕಿತು. ಆವರೆಗೂ ಅಂತರ್‌ರಾಷ್ಟ್ರೀಯ ವ್ಯಾಪಾರಕ್ಕೆ ಇದ್ದ ನಿರ್ಬಂಧಗಳನ್ನು ಸಡಿಲಗೊಳಿಸಿ, ತನ್ನ ಮಾರುಕಟ್ಟೆಯನ್ನು ಮುಕ್ತ ವಾಗಿಸುವ ಜಾಗತೀಕರಣ, ಉದಾರೀಕರಣಕ್ಕೆ ಮುಂದಾಯಿತು.
ಅಷ್ಟಾದ ಮೇಲೂ, ಡೇರಿ ವಲಯದ ಮುಕ್ತತೆಗೆ ಕೆಲವು ನಿಬಂಧನೆಗಳು ಮುಂದುವರಿದವು. ಹಾಗಾಗಿ, ಭಾರತ ಕೂಡ ಡೇರಿ ಉತ್ಪನ್ನಗಳ ಆಮದನ್ನು ಸಾಕಷ್ಟು ಮಟ್ಟಿಗೆ ತಡೆಯಲು ಸಾಧ್ಯವಾಗಿತ್ತು. ಆದರೆ ಆನಂತರದ ಬೆಳವಣಿಗೆಗಳಲ್ಲಿ ವಿಶ್ವ ವ್ಯಾಪಾರ ಸಂಸ್ಥೆ (WTO) ಗ್ಯಾಟ್‌ನ ಸಮಗ್ರ ಕೃಷಿ ಸಂಬಂಧಿ ಒಪ್ಪಂದದೊಳಗಿನ ಡೇರಿ ವಿಷಯದಲ್ಲಿ ಎಲ್ಲ ದೇಶಗಳೊಂದಿಗೆ ಸಮನ್ವಯ ಸಾಧಿಸಲು ಪ್ರಯತ್ನಿಸಿತು. ದೇಶಗಳು ತಮ್ಮ ಡೇರಿ ವಲಯಕ್ಕೆ ನೀಡುವ ಪ್ರೋತ್ಸಾಹಗಳು, ರಫ್ತಿಗೆ ನೀಡುವ ಸಬ್ಸಿಡಿಗಳು, ಆಮದಿಗೆ ಒಡ್ಡುವ ತಡೆಗೋಡೆಗಳು, ಮುಂತಾದ ಸರಕಾರಿ ಪ್ರೋತ್ಸಾಹಕ, ನಿಯಂತ್ರಣ ಕ್ರಮಗಳನ್ನು ತೆರವುಗೊಳಿಸಿ, ಯಾರು ಹೆಚ್ಚು ಸಮರ್ಥ ಡೇರಿ ಉತ್ಪಾದಕ ಮತ್ತು ಪೂರೈಕೆದಾರರೋ ಅವರಿಗೆ ಹೆಚ್ಚು ವ್ಯಾಪಾರ ಎನ್ನುವ ವಾತಾವರಣವನ್ನು ನಿರ್ಮಿಸಲು ಅದು ಶ್ರಮಪಟ್ಟಿತು. ಆ ಒಪ್ಪಂದದ ಪ್ರಕಾರ ಅಭಿವೃದ್ಧಿ ಹೊಂದಿದ ದೇಶಗಳು ೧೯೯೫ ರಿಂದ ೨೦೦೦ದ ಒಳಗೆ, ಅಭಿವೃದ್ಧಿಶೀಲ ದೇಶಗಳು ೨೦೦೪ರ ಒಳಗೆ ರಫ್ತು ಸಬ್ಸಿಡಿಗಳನ್ನು ಕಡಿಮೆ ಮಾಡಿ, ಆಮದನ್ನು ಮಾರುಕಟ್ಟೆ ಮುಕ್ತತೆಗೆ ಬಿಟ್ಟುಕೊಡಬೇಕು.
ಆದರೆ ಯಾವ ದೇಶಗಳೂ ಇದಕ್ಕೆ ತಯಾರಿಲ್ಲ. ಒಂದು ಕಡೆ ಆಮದು ಕಡಿಮೆ ಇರುವಂತೆ ನಿರ್ಬಂಧಿಸಿ, ಮತ್ತೊಂದು ಬದಿಯಿಂದ ರಫ್ತು ಹೆಚ್ಚು ಮಾಡುವ ಉಪಾಯಗಳನ್ನೇ ಅನುಸರಿಸುತ್ತಿವೆ. ಒಪ್ಪಂದಕ್ಕೆ ಸಹಿ ಹಾಕಿದ ಮೇಲೂ ಆಯಾ ದೇಶಗಳು ತಮ್ಮ ಡೇರಿ ವಲಯಗಳಿಗೆ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಿಂದ ಅತಿಹೆಚ್ಚು ರಕ್ಷಣೆ ನೀಡುತ್ತ ದೊಡ್ಡ ಪ್ರಮಾಣದ ಆಮದನ್ನು ತಡೆಯುತ್ತಿವೆ. ಮತ್ತೊಂದು ಕಡೆ, ಒಪ್ಪಂದದಲ್ಲಿ ನಿಗದಿಯಾದ ಕನಿಷ್ಠ ರಫ್ತು ಬೆಲೆಗಿಂತ ಕಡಿಮೆ ಬೆಲೆಯಲ್ಲಿ ರಫ್ತು ಮಾಡಲು ತಮ್ಮ ಡೇರಿ ಕಂಪೆನಿಗಳಿಗೆ ಪ್ರೋತ್ಸಾಹಿಸಿ, ಅದಕ್ಕೆ ಪರಿಹಾರವಾಗಿ ದೊಡ್ಡ ಪ್ರಮಾಣದ ಸಬ್ಸಿಡಿ ನೀಡುತ್ತಿವೆ. ಇದರಿಂದಾಗಿ ಅಂತರ್‌ರಾಷ್ಟ್ರೀಯ ಡೇರಿ ಮಾರುಕಟ್ಟೆಯಲ್ಲಿ ಬೆಲೆಗಳು ಮೇಲೇಳುತ್ತಿಲ್ಲ ಎನ್ನುವಂತಿದೆ ಪರಿಸ್ಥಿತಿ. ಈ ವಾತಾವರಣದಲ್ಲಿ ಡೇರಿ ಒಪ್ಪಂದವು ಗ್ಯಾಟ್ ಒಪ್ಪಂದಗಳಲ್ಲೇ ಅತಿಹೆಚ್ಚು ಗೋಜಲಾದ ಒಪ್ಪಂದ ಎಂದು ಕುಖ್ಯಾತಿ ಪಡೆದಿದೆ.
ಈಗ ಭಾರತದ ಸ್ಥಿತಿ ನೋಡಿ. ೧೯೯೮ರಲ್ಲಿ ಭಾರತ ಜಗತ್ತಿನಲ್ಲೇ ಅತಿಹೆಚ್ಚು ಹಾಲು ಉತ್ಪಾದಿಸುವ ದೇಶ ಎಂದು ಎನಿಸಿಕೊಂಡಿತು. ಇಂದು ದೇಶದಲ್ಲಿ ಇರುವ ಹಾಲಿನ ಉತ್ಪನ್ನಗಳ ಬೇಡಿಕೆಯ ಪ್ರಮಾಣಕ್ಕೂ ಹೆಚ್ಚು ಹಾಲನ್ನು ದೇಶ ಉತ್ಪಾದಿಸುತ್ತಿದೆ. ಈ ಲೇಖನ ಸರಣಿಯ ಮೊದಲ ಭಾಗದಲ್ಲಿ ಹೇಳಿರುವಂತೆ ದೇಶದ ಸರಾಸರಿ ತಲಾವಾರು ಹಾಲಿನ ಲಭ್ಯತೆ ೨೦೧೮ರಲ್ಲಿ ೩೭೪ ಗ್ರಾಂಗೆ ಏರಿತು. ಇದು ಜಾಗತಿಕ ಸರಾಸರಿ ೨೯೪ ಗ್ರಾಂಗಿಂತ ಹೆಚ್ಚು. ಹೀಗಿದ್ದರೂ, ಹಂಚಿಕೆ ಅಸಮಾನವಾಗಿದೆ ಎನ್ನುವುದು ಬೇರೆ ವಿಷಯ. ಆದರೆ ಗ್ಯಾಟ್‌ನ ಕೃಷಿ ವಲಯಕ್ಕೆ ಸಂಬಂಧಿಸಿದ ಒಪ್ಪಂದದಂತೆ ಭಾರತ ಡೇರಿ ಉತ್ಪನ್ನಗಳನ್ನು ಒಂದಷ್ಟು ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಬೇಕು. ಆ ಪ್ರಮಾಣಕ್ಕಿಂತ ಹೆಚ್ಚು ರಫ್ತು ಮಾಡಿದಾಗ ಮಾತ್ರ ದೇಶದ ಡೇರಿ ವಲಯ ಆಂತರಿಕವಾಗಿ ಆರೋಗ್ಯಕರವಾಗಿರುತ್ತದೆ. ಆದರೆ ರಫ್ತು ಹೆಚ್ಚು ಮಾಡಲು ಬೇಡಿಕೆ ಇರುವ ದೇಶಗಳ ನಿಬಂಧನೆಗಳು ಅಸಂಖ್ಯ. ಮೊದಲನೆಯದಾಗಿ, ಇತರ ದೇಶಗಳ ಆಂತರಿಕ ಸಬ್ಸಿಡಿಗಳಿಂದಾಗಿ ಅಂತರ್‌ರಾಷ್ಟ್ರೀಯ ಡೇರಿ ಮಾರುಕಟ್ಟೆಯ ಬೆಲೆಗೆ (tariff measures) ಸ್ಪರ್ಧಾತ್ಮಕವಾಗಿ ನಮ್ಮ ದೇಶ ರಫ್ತು ಮಾಡಲಾಗುತ್ತಿಲ್ಲ. ಇನ್ನೊಂದು ಕಡೆ, ಭಾರತದ ಡೇರಿ ಉತ್ಪನ್ನಗಳನ್ನು ಅಭಿವೃದ್ಧಿ ಹೊಂದಿದ ದೇಶಗಳು ಕ್ವಾಲಿಟಿ, ಮುಂತಾದ ಬೆಲೆಗೆ ಹೊರತಾದ ವಿಚಾರಗಳ (non-tariff measures) ಆಧಾರದ ಮೇಲೆ ತಿರಸ್ಕರಿಸುತ್ತವೆ. ಹೀಗಾಗಿ, ಭಾರತ ಏನೇ ತಿಪ್ಪರಲಾಗ ಹಾಕಿದರೂ ನಿರೀಕ್ಷಿತ ಮಟ್ಟದಲ್ಲಿ ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ಅತಿಹೆಚ್ಚು ಹಾಲು ಉತ್ಪಾದಿಸುವ ದೇಶ ಅತಿ ಕಡಿಮೆ ರಫ್ತು ಮಾಡುತ್ತಿದೆ ಎನ್ನುವುದು ಅಂತರ್‌ರಾಷ್ಟ್ರೀಯ ಮಾರುಕಟ್ಟೆ ದೃಷ್ಟಿಯಿಂದ ಶೋಚನೀಯ. ಹೀಗಿರುವಲ್ಲಿ ತನ್ನೊಳಗಿನ ‘ಅಧಿಕ’ ಉತ್ಪನ್ನದ ಪ್ರಮಾಣವನ್ನು ಹೇಗೆ ನಿಭಾಯಿಸಬೇಕು? ಇದು ನಮ್ಮ ಡೇರಿ ವಲಯ ಇಂದು ಅನುಭವಿಸುತ್ತಿರುವ ವಾಸ್ತವ ಸ್ಥಿತಿ. ಇಲ್ಲಿಂದಲೇ ಆರಂಭವಾಗುತ್ತದೆ ನಮ್ಮ ಸಹಕಾರಿಗಳ ನಡುವಣ ಅನೈತಿಕ ಸ್ಪರ್ಧೆ.
(ನಾಳೆ: ಅಮುಲ್ ಮತ್ತು ನಂದಿನಿ ನಡುವಣ ಸ್ಪರ್ಧೆಯ ವಿಷಮ ಹಂದರ)







